
ಮೈಸೂರು
ಸಾಹಿತ್ಯ ಸಮ್ಮೇಳನ ಹಿನ್ನೆಲೆ : ಪ್ರಮುಖ ವೃತ್ತಗಳಿಗೆ ದೀಪಾಲಂಕಾರದ ಮೆರುಗು
ಮೈಸೂರು, ನ.21:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ ಎಂದು ಸಮ್ಮೇಳನದ ಪ್ರಧಾನ ಸಂಚಾಲಕರಾದ, ಜಿಲ್ಲಾಧಿಕಾರಿ ರಂದೀಪ್ ಡಿ. ತಿಳಿಸಿದ್ದಾರೆ.
ಕೃಷ್ಣರಾಜ ಒಡೆಯರ್ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ, ಚಾಮರಾಜೇಂದ್ರ ಒಡೆಯರ್ ವೃತ್ತ, ರಾಮಸ್ವಾಮಿ ವೃತ್ತ, ಏಕಲವ್ಯ ವೃತ್ತ(ಮಹಾರಾಜ ಕಾಲೇಜು ಮೈದಾನದ ಸಮೀಪ) ಮುಂತಾದ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಇದಲ್ಲದೆ, ವಿವಿಧ ರಸ್ತೆಗಳು ಸಹ ವಿದ್ಯುತ್ ದೀಪಾಲಂಕಾರಗೊಳ್ಳಲಿವೆ. ಜಿಲ್ಲಾ ಪಂಚಾಯತ್ ಕಚೇರಿಯಿಂದ ಹುಣಸೂರು ರಸ್ತೆ ವರೆಗಿನ ರಸ್ತೆ, ಜೆ.ಎಲ್.ಬಿ. ರಸ್ತೆಯಲ್ಲಿ ರೈಲ್ವೇ ನಿಲ್ದಾಣದಿಂದ ರಾಮಸ್ವಾಮಿ ವೃತ್ತದ ವರೆಗೆ, ರಾಮಸ್ವಾಮಿ ವೃತ್ತದಿಂದ ಪಾಠಶಾಲಾ ವೃತ್ತದ ಮೂಲಕ ಹಾರ್ಡಿಂಜ್ ವೃತ್ತ, ಬಸ್ ನಿಲ್ದಾಣದ ವರೆಗೂ ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ.
ಎಲ್.ಇ.ಡಿ. ಬಲ್ಬಗಳನ್ನು ಅಳವಡಿಸಲಾಗಿದೆ. ನವೆಂಬರ್ 22 ರಂದು ಪ್ರಾಯೋಗಿಕವಾಗಿ ದೀಪಗಳನ್ನು ಬೆಳಗಲಾಗುತ್ತದೆ. ನವೆಂಬರ್ 23 ರಿಂದ 27 ರವರೆಗೆ ನಿಯಮಿತವಾಗಿ ಸಂಜೆ ಅವಧಿಯಲ್ಲಿ ದೀಪಾಲಂಕಾರ ಇರುತ್ತದೆ ಎಂದು ದೀಪಾಲಂಕಾರ ಸಮಿತಿ ಕಾರ್ಯಾಧ್ಯಕ್ಷ, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ನರಸಿಂಹೇಗೌಡ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)