ದೇಶಪ್ರಮುಖ ಸುದ್ದಿ

48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಪಣಜಿ,(ಗೋವಾ),ನ.21-ಮಹಿಳಾ ಸಬಲೀಕರಣದ ಸಂಕೇತವಾಗಿ ರೂಪಿಸಿದ್ದ ಡ್ರಮ್ಸ್ ಆಫ್ ಇಂಡಿಯಾ ನೃತ್ಯ ಕಾರ್ಯಕ್ರಮದ ಮೂಲಕ ಭಾರತದ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.

ಪಣಜಿ ಹೊರ ವಲಯದ ತಾಲೇಗಾವ್ನ ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆಯಿತು. ನೃತ್ಯದ ಕೊನೆಯಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಎಲ್ಲರನ್ನೂ ಸ್ವಾಗತಿಸಿ, ಶುಭ ಕೋರಿದರು.

ನಂತರ ಮಾತನಾಡಿದ ಅವರು, ಕಥೆ ಹೇಳುವುದು ಮತ್ತು ಕಥೆ ಕೇಳುವುದೇ ಸಿನಿಮಾ. ವಿಭಿನ್ನ ಸಿದ್ಧಾಂತಗಳ ಹಲವಾರು ಪ್ರತಿಭಾವಂತರು ಒಟ್ಟಾಗಿ ದುಡಿದು ಸಿನಿಮಾ ಎಂಬ ಮ್ಯಾಜಿಕ್ ರೂಪಿಸುತ್ತಿದ್ದಾರೆ. ಕಥೆ ಹೇಳುವ ಮತ್ತು ಕೇಳುವ ಪ್ರಕ್ರಿಯೆ ಜಗತ್ತಿನ ಜನರನ್ನು ಒಂದುಗೂಡಿಸುತ್ತಿದೆ. ಸಿನಿಮಾ, ಭಾಷೆ ಮತ್ತು ದೇಶಗಳ ಗಡಿಗಳನ್ನು ಮೀರಿದೆ ಎಂದು ಶಾರುಖ್ ಚುಟುಕಾಗಿ ನುಡಿದರು.

ನೃತ್ಯ ಕಲಾವಿದೆಯರಾದ ಮಯೂರಿ ಉಪಾಧ್ಯಾಯ ಮತ್ತು ಮಾಧುರಿ ಉಪಾಧ್ಯಾಯ ಅವರ ತಂಡದವರು ನಡೆಸಿಕೊಟ್ಟ ಭಾರತೀಯ ಉತ್ಸವಗಳ ನೃತ್ಯ ರೂಪಕ ಮತ್ತು ಕಳೆದ ಒಂದು ವರ್ಷದ ಅವಧಿಯಲ್ಲಿ ಅಗಲಿದ ದೇಶದ ಹಲವಾರು ಸಿನಿಮಾ ಗಣ್ಯರನ್ನು ತೆರೆಯ ಮೇಲೆ ತೋರಿಸಿ ಸ್ಮರಿಸುವ ಗೀತ ರೂಪಕ ಎಲ್ಲರ ಗಮನ ಸೆಳೆಯಿತು.

ಉದ್ಘಾಟನೆ ಸಮಾರಂಭದ ನಂತರ ಇರಾನ್ ನ ಮಾಜಿದ್ ಮಾಜಿದಿ ನಿರ್ದೇಶನದ `ಬಿಯಾಂಡ್ ದ ಕ್ಲೌಡ್ಸ್ ಚಲನಚಿತ್ರ’ ಪ್ರದರ್ಶಿಸಲಾಯಿತು. 82 ದೇಶಗಳ ನಾನಾ ಭಾಷೆಗಳ 195 ಆಯ್ದು ಅತ್ಯುತ್ತಮ ಸಿನಿಮಾಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್, ಕೆನಡಾ ಸರ್ಕಾರದ ಕೌನ್ಸೆಲ್ ಜನರಲ್ ಗಾರ್ಡನ್ ರೀವ್, ಅಂತಾರಾಷ್ಟ್ರೀಯ ಸಿನಿಮಾಗಳ ಆಯ್ಕೆ ಸಮಿತಿ ಅಧ್ಯಕ್ಷ ಮುಜಫರ್ ಅಲಿ, ನಟ ಶಾಹಿದ್ ಕಪೂರ್, ನಟಿ ಶ್ರೀದೇವಿ, ಇರಾನ್ ದೇಶದ ಚಿತ್ರ ನಿರ್ದೇಶಕ ಮಜೀದ್ ಮಜಿದಿ, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್, ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹ, ಹಿಂದಿ ನಟ ನಾನಾ ಪಾಟೇಕರ್, ಅನುಪಮ್ ಖೇರ್ ಸೇರಿದಂತೆ ಹಲವಾರು ಸಿನಿಮಾ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. (ವರದಿ-ಎಂ.ಎನ್)

 

 

Leave a Reply

comments

Related Articles

error: