ಪ್ರಮುಖ ಸುದ್ದಿಮೈಸೂರು

ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಕಡೆ ಗಮನ ನೀಡದೇ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ : ಹೆಚ್.ಎ.ವೆಂಕಟೇಶ್ ಸಲಹೆ

ಮೈಸೂರು,ನ.21:- ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಕಡೆ ಗಮನ ನೀಡದೇ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಸಲಹೆ ನೀಡಿದರು.

ಮೈಸೂರಿನ ರಂಗಾಯಣದ ವನರಂಗದಲ್ಲಿ ಮಂಗಳವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಬಾಲವಿಕಾಸ ಅಕಾಡೆಮಿ ಧಾರವಾಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಮಕ್ಕಳ ಹಬ್ಬ-2017ರಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಿಗೆ ಆಸ್ತಿ ಮಾಡುವುದು ಮುಖ್ಯವಲ್ಲ. ಮಗು ಸಮಾಜದ ಆಸ್ತಿಯಾಗಬೇಕು. ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಬೇಕಾದ ಅವಶ್ಯಕತೆ ಬಹಳಾನೇ ಇದೆ. ತನ್ಮೂಲಕ ಸಮಾಜದಲ್ಲಿ ಬೆಳೆಯತಕ್ಕಂತಹ ವಾತಾವರಣವನ್ನು ನಿರ್ಮಾಣಮಾಡತಕ್ಕ ಅವಶ್ಯಕತೆಯಿದೆ ಎಂದರು. ಮಕ್ಕಳೆ ಇಂದಿನ ಸಂಪತ್ತು. ಯಾವ ಕ್ಷೇತ್ರದಲ್ಲಿ ಮಕ್ಕಳು ಪರಿಣಿತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸುವುದು ಪೋಷಕರ ಕರ್ತವ್ಯ. ಇಂಜಿನಿಯರ್ ಆಗು, ಮೆಡಿಕಲ್ ಓದು ಎಂದು ಮಕ್ಕಳಿಗೆ ಒತ್ತಾಯ ಮಾಡಬಾರದು. ಪ್ರಕೃತಿದತ್ತವಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಭೆ ಹೊಂದಿರುತ್ತಾರೆ. ಮಗುವಿಗೆ ಯಾವ ಯಾವ ಕ್ಷೇತ್ರದಲ್ಲಿ ಪ್ರತಿಭೆ ಇದೆಯೋ ಆಕ್ಷೇತ್ರಕ್ಕೆ ಕಳುಹಿಸಬೇಕು. ಮಕ್ಕಳಿಗೆ ಆರೋಗ್ಯಪೂರ್ಣವಾದ ಹತ್ತಾರು ಕಾರ್ಯಕ್ರಮಗಳನ್ನು ಸರ್ಕಾರ ನೀಡಿದೆ. ಮಕ್ಕಳಿಗೆ ಬಿಸಿಯೂಟ, ಮಕ್ಕಳ ಶಾಲೆ ಕಡೆ ಆಕರ್ಷಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ವಿಶೇಷ ಒತ್ತನ್ನು ನೀಡುತ್ತಿದೆ. ಮಕ್ಕಳನ್ನು ನಾಡಿನ ಸಂಪತ್ತನ್ನಾಗಿ ಬೆಳೆಸಲು ಜನ ಯೋಚಿಸಬೇಕು. ಅವರಿಗೆ ಆಸ್ತಿ ಮಾಡದೇ ಮಕ್ಕಳನ್ನೇ ನಾಡಿನ ಸ್ತಿಯನ್ನಾಗಿ ಮಾಡಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ ಮಕ್ಕಳು ನಮ್ಮ ದೇಶದ ಮುಂದಿನ ಭವಿಷ್ಯ. ದರೆ ಕೆಲವು ಕಡೆ ಮಕ್ಕಳ ಪರಿಸ್ಥಿತಿ ಗಂಭೀರ. ಜಿಲ್ಲೆಯ ಅಂಕಿಅಂಶ ನೋಡಿದಾಗ ಒಂದು ಸಾವಿರಕ್ಕಿಂತ ಅಧಿಕ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದು ಇದು ಎಲ್ಲರೂ ಗಂಭೀರವಾಗಿ ಪರಿಗಣಿಸಲೇಬೇಕಾದ ವಿಚಾರ ಎಂದರು. 1ರಿಂದ 15ರ ವಯಸ್ಸಿನವರೆಗಿನವರನ್ನು ಮಕ್ಕಳಂತೆಯೇ ನೋಡಬೇಕು.ಮಕ್ಕಳು ತಪ್ಪು ಮಾಡಲು ಪೋಷಕರ, ಸಮಾಜದ, ಗುರುಗಳ, ಶಾಲೆಯ ವಾತಾವರಣಗಳೂ ಕಾರಣವಾಗುತ್ತದೆ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿ, ಸರಿಯಾದ ಪೋಷಣೆ ನೀಡಬೇಕು. ಹೆಣ್ಣು ಭ್ರೂಣ ಹತ್ಯೆಯಿಂದ ಹಿಡಿದು ಬಾಲಕಾರ್ಮಿಕ, ಶಾಲಾ ವಾತಾವರಣದಲ್ಲಿ ಕಿರುಕುಳ, ಹಕ್ಕುಗಳ ಕಸಿಯುವಿಕೆ ಇವುಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಕು ಎಂದರಲ್ಲದೇ, ಅಪೌಷ್ಠಿಕತೆಯಿಂದ ಬಳಲುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಮಕ್ಕಳ ಹಬ್ಬವನ್ನು ಬಲೂನ್ ಹಾರಿ ಬಿಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಹೆಚ್.ಟಿ.ಕಮಲ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: