ಮೈಸೂರು

ಮತ್ತೆ ಬಂದಿದೆ ಜಗದೋದ್ಧಾರಕನ ಜನ್ಮಾಷ್ಟಮಿ ಸಂಭ್ರಮ

ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ

ಭಾಗವತರು ನಿನ್ನ ಎತ್ತಿ ಕೊಂಡೊಯ್ವರು

ಪೊಗದಿರೆಲೋ ರಂಗ…

ಚಿಕ್ಕ ಮಕ್ಕಳು ತುಂಟಾಟಗಳನ್ನು ಮಾಡುವಾಗ ಅವರನ್ನು ಸಂಭಾಳಿಸಲು ಹಿರಿಯರು ಈ ಹಾಡನ್ನು ಹೇಳಿ ಅವರನ್ನು ಬಾಗಿಲಿಂದ ಹೊರ ಹೋಗದಂತೆ ತಡೆಯುತ್ತಾರೆ. ಅಷ್ಟೇ ಅಲ್ಲ ತಮ್ಮ ಮುದ್ದು ಕಂದಮ್ಮಗಳನ್ನು ಬಹುಶಃ ಕೃಷ್ಣನ ವೇಷದಲ್ಲಿ ನೋಡದವರೇ ಇಲ್ಲವೇನೋ..?

ಜಗದೋದ್ಧಾರಕ ಶ್ರೀಕೃಷ್ಣ ಎಲ್ಲರಿಗೂ ಅಚ್ಚುಮೆಚ್ಚು. ಅವನ ಬಾಲಲೀಲೆಗಳ ಕಥೆಗಳನ್ನು ಕೇಳಿದರಂತೂ ಮೈ ರೋಮಾಂಚನಗೊಳ್ಳುತ್ತದೆ.

ಸೃಷ್ಟಿಯಲ್ಲಿ ಮಾನವ ಜನ್ಮಕ್ಕಿಂತ ಶ್ರೇಷ್ಠ ಜನ್ಮ ಬೇರಾವುದು ಇಲ್ಲ. ಅದಕ್ಕೆಂದೇ ದೇವಾನುದೇವತೆಗಳೂ ಸಹ ಮಾನವ ಜನ್ಮವನ್ನು ತಳೆದಿದ್ದರಂತೆ. ಅದಕ್ಕೆ ಶ್ರೀಕೃಷ್ಣನೂ ಹೊರತಾಗಿಲ್ಲ. ಭೂಲೋಕದ ಸವಿಯನ್ನು ಸವಿಯಲು ಶ್ರೀಕೃಷ್ಣನೂ ಮಾನವ ಜನ್ಮ ತಳೆದಿದ್ದನಂತೆ. ಅಂತಹ ಪೊಡವಿಗೊಡೆಯನಿಗೆ ಮತ್ತೆ ಜನ್ಮಾಷ್ಟಮಿಯ ಸಂಭ್ರಮ ಬಂದಿದೆ. ಆಗಸ್ಟ್ 25ರಂದು ಶ್ರೀಕೃಷ್ಣ ಜನ್ಮಾಷ್ಟಮಿ.

ಶ್ರಾವಣ ಬಹುಳ ಅಷ್ಟಮಿಯಂದು ಹಿಂದುಗಳಿಗೆ ಸ್ವರ್ಗದ ಬಾಗಿಲು ತೆರೆದಂತೆ. ಯಾಕೆಂದರೆ ಆ ದಿನ ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಮಹಾವಿಷ್ಣು ಕೃಷ್ಣಾವತಾರ ತಾಳಿ ದೇವಕಿ ಗರ್ಭದಲ್ಲಿ ಜನಿಸಿದ ದಿನ. ಈ ದಿನವನ್ನು ಗೋಕುಲಾಷ್ಟಮಿ ಎಂತಲೂ ಕರೆಯುತ್ತಾರೆ. ಪ್ರಾತಃಕಾಲದಲ್ಲಿಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಉಪವಾಸವಿದ್ದು, ಕೃಷ್ಣನನ್ನು ಧ್ಯಾನಿಸಲಾಗುತ್ತದೆ. ರಾತ್ರಿ 11 ಗಂಟೆಯಿಂದ ಎಲ್ಲ ಕೃಷ್ಣ ಮಂದಿರಗಳಲ್ಲಿಯೂ ವಿಶೇಷ ಪೂಜೆ ಆರಂಭವಾಗುತ್ತದೆ. ಚಕ್ಕುಲಿ, ಲಡ್ಡುಗಳ ವಿಶೇಷ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ಕೃಷ್ಣನಿಗೆ ಅವಲಕ್ಕಿ ಎಂದರೆ ತುಂಬಾ ಪ್ರೀತಿ. ಆತನ ಪರಮಾಪ್ತ ಸ್ನೇಹಿತ ಸುಧಾಮ, ಕೃಷ್ಣನನ್ನು ಭೇಟಿಯಾಗಲು ಬಂದಾಗ ಏನೂ ಕೊಡಲು ತೋಚದೆ ಮನೆಯಲ್ಲಿದ್ದ ಅವಲಕ್ಕಿಯನ್ನೇ ತಂದಿದ್ದನಂತೆ. ಅದರಿಂದ ಶ್ರೀಕೃಷ್ಣನಿಗೆ ಅವಲಕ್ಕಿ ತುಂಬಾ ಪ್ರೀತಿ ಎಂಬುದನ್ನು ಪುರಾಣ ಕಥೆಗಳು ತಿಳಿಸುತ್ತವೆ. ಹಲವಾರು ಸಂಘ-ಸಂಸ್ಥೆಗಳ ವತಿಯಿಂದ ಹಾಗೂ ಇಸ್ಕಾನ್ ದೇವಾಲಯದಲ್ಲಿ ಮಕ್ಕಳಿಗಾಗಿ ಬೆಣ್ಣೆಕೃಷ್ಣ, ಗೋಪಿಕೃಷ್ಣ, ಬಾಲಕೃಷ್ಣ, ಯಶೋಧೆ ಕೃಷ್ಣ ಸೇರಿದಂತೆ ಕೃಷ್ಣನ ವಿವಿಧ ರೂಪಗಳ ಅವತಾರಗಳ, ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಅಲ್ಲಿರುವ ಚಿಣ್ಣರನ್ನು ನೋಡಿದರೆ ಗೋಕುಲವೇ ಸೃಷ್ಟಿಯಾಗಿ ಸಾಕ್ಷಾತ್ ಶ್ರೀಕೃಷ್ಣನೇ ಧರೆಗಿಳಿದಂತೆ ಭಾಸವಾಗುತ್ತದೆ. ಮೈಸೂರಿನ ನಾರಾಯಣ ಶಾಸ್ತ್ರೀ ರಸ್ತೆಯಲ್ಲಿರುವ ಉಡುಪಿ ಕೃಷ್ಣಮಂದಿರದಲ್ಲಿ ಹಾಗೂ ಜಯನಗರದ ಸಮೀಪವಿರುವ ಇಸ್ಕಾನ್ ಮಂದಿರದಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಂದರ್ಭ ಕೃಷ್ಣನಿಗೆ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗುತ್ತದೆ.

ಉಡುಪಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ ನಾಡಿನ, ದೇಶ-ವಿದೇಶಗಳಿಂದ ಬಂದ ಲಕ್ಷಾಂತರ ಭಕ್ತರು ಪಾಲ್ಗೊಂಡು ಶ್ರೀಕೃಷ್ಣನನ್ನು ಕಣ್ತುಂಬಿಸಿಕೊಳ್ಳುತ್ತಾರೆ.

ಜಗದೋದ್ಧಾರಕ ಪೊಡವಿಗೊಡೆಯನ ಕೃಪಾಕಟಾಕ್ಷ ಎಲ್ಲರ ಮೇಲಿರಲಿ.

Leave a Reply

comments

Related Articles

error: