ಕರ್ನಾಟಕ

ಕರಿಮೆಣಸು ಆಮದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲು ತೀರ್ಮಾನ

ರಾಜ್ಯ( ಮಡಿಕೇರಿ) ನ. 21: – ಭಾರತಕ್ಕೆ ವಿದೇಶಗಳಿಂದ ಕರಿಮೆಣಸು ಆಮದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಬೆಳೆಗಾರ ಸಂಘಟನೆಗಳ ನಿಯೋಗ ನ.23 ರಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ. ಕರಿಮೆಣಸನ್ನು ನಿಯಮ ಬಾಹಿರವಾಗಿ ಆಮದು ಮಾಡಿಕೊಂಡು ಭಾರತೀಯ ಕರಿಮೆಣಸಿನೊಂದಿಗೆ ಮಿಶ್ರಣ ಮಾಡುವ ಕಾನೂನುಬಾಹಿರ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಬೆಳೆಗಾರ ಸಂಘಟನೆಗಳು ಒಮ್ಮತದಿಂದ ಒತ್ತಾಯಿಸಿದೆ.

ಸಕಲೇಶಪುರದಲ್ಲಿನ ಕಾಫಿ ಬೆಳೆಗಾರರ ಸಂಘದ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಮಹತ್ವದ ಸಭೆ ನಡೆಸಿದ ಹಲವಾರು ಬೆಳೆಗಾರ ಸಂಘಟನೆಗಳ ಪ್ರಮುಖರು, ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರ ಬಳಿ ನ.23 ರಂದು ಗುರುವಾರ ನಿಯೋಗ ತೆರಳಿ , ವಿದೇಶಗಳಿಂದ ಕರಿಮೆಣಸು ಆಮದಿನಿಂದ ಭಾರತೀಯ ಕರಿಮೆಣಸು ಉದ್ಯಮದ ಮೇಲೆ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೂಲಂಕುಶವಾಗಿ ತಿಳಿಸಲು ತೀರ್ನಿಮಾಸಿದವು.

ಈ ಕೂಡಲೇ ಕೇಂದ್ರ ಸರ್ಕಾರವು ಕರಿಮೆಣಸು ಆಮದನ್ನು ನಿಲ್ಲಿಸಬೇಕು. ಸಂಬಾರ ಮಂಡಳಿಯು ಮರು ಆಮದುಗೊಳ್ಳುವ ಕರಿಮೆಣಸಿಗೆ ಸರ್ಟಿ ಫಿಕೇಟ್ ನೀಡುವುದನ್ನು ಸ್ಥಗಿತಗೊಳಿಸಬೇಕು. ಕೇಂದ್ರ ವಾಣಿಜ್ಯ ಸಚಿವಾಲಯಲು ಆಮದುಗೊಳ್ಳುವ ಕರಿಮೆಣಸಿಗೆ ಅಡಕೆ ಮತ್ತು ಏಲಕ್ಕಿ ಮಾದರಿಯಂತೆ ಟನ್ ಒಂದಕ್ಕೆ 8 ಸಾವಿರ ಡಾಲರ್ ಕನಿಷ್ಟ ಆಮದು ಶುಲ್ಕವನ್ನು ವಿಧಿಸಬೇಕು. ಆಮದುಗೊಳ್ಳುವ ವಾಣಿಜ್ಯ ಬೆಳೆಗಳ ಮೇಲೆ ಅವು ಯಾವ ದೇಶದಲ್ಲಿ ಬೆಳೆಸಲ್ಪಟ್ಟವು ಎಂಬುದನ್ನು ನಮೂದಿಸುವ ನಿಯಮ ಜಾರಿಗೊಳಿಸಬೇಕು. ರಬ್ಬರ್ ನಂತೆ ಕರಿಮೆಣಸು ಆಮದುಗೊಳ್ಳಲೇಬೇಕಾಗಿದ್ದರೆ ಭಾರತದ ಯಾವುದಾದರೂ ಎರಡು ನಿರ್ದಿಷ್ಟ ಬಂದರುಗಳ ಮೂಲಕವೇ ಆಮದಾಗಬೇಕೆಂದು ನಿಯಮ ರೂಪಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವರಿಗೆ ಸಲ್ಲಿಸಲಾಗುವ ಮನವಿಯಲ್ಲಿ ತಿಳಿಸಲು ಸಭೆಯಲ್ಲಿ ವಿವಿಧ ಬೆಳೆಗಾರ ಸಂಘಟನೆಗಳ ಪ್ರಮುಖರು ಒಮ್ಮತಾಭಿಪ್ರಾಯ ತಳೆದರು. ಸಕಲೇಶಪುರದಲ್ಲಿ ನಡೆದ ಸಭೆಯಲ್ಲಿ ಉಪಾಸಿ, ಕ್ಯಾಂಪ್ಕೋ, ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕೂರ್ಗ್  ಪ್ಲಾಂಟರ್ಸ್ ಅಸೋಸಿಯೇಷನ್, ಕೇರಳ ಬೆಳೆಗಾರರ ಒಕ್ಕೂಟ , ಅಡಕೆ, ಕೋಕೋ ಬೆಳೆಗಾರ ಸಂಘಟನೆ, , ಬ್ಲಾಕ್ ಗೋಲ್ಡ್ ಲೀಗ್, ಕೊಡಗು ಬೆಳೆಗಾರರ ಒಕ್ಕೂಟ, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಶಿರಸಿಯ ಅಡಕೆ ಬೆಳೆಗಾರರ ಸೊಸೈಟಿ,, ಸಹಕಾರ ಭಾರತಿ,ಹಾಸನ ಜಿಲ್ಲಾ ಬೆಳೆಗಾರರ ಸಂಘ ಸೇರಿದಂತೆ 15 ವಿವಿಧ ಬೆಳೆಗಾರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕರಿಮೆಣಸು ಆಮದು ನಿಷೇಧಿಸುವ ಸಂಬಂಧಿತ ನೂತನ ಸಮಿತಿಯ ಮುಖ್ಯ ಸಂಚಾಲಕರಾಗಿ ಕೊಂಕೋಡಿ ಪದ್ಮನಾಭ , ಸಹಸಂಚಾಲಕರಾಗಿ ಕೆ.ಕೆ.ವಿಶ್ವನಾಥ್ ಅವರನ್ನು ನೇಮಕಗೊಳಿಸಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. (ಕೆಸಿಐ,ಎಸ್.ಎಚ್)

 

Leave a Reply

comments

Related Articles

error: