ಮೈಸೂರು

ಬ್ಯಾಂಕ್ ನಲ್ಲಿ ಮುಂದುವರಿದ ನೂಕುನುಗ್ಗಲು : ಸಾರ್ವಜನಿಕರ ಗೊಣಗಾಟ

ಮೈಸೂರಿನ ಹಲವೆಡೆ ಅಳವಡಿಸಲಾದ ಎಟಿಎಂಗಳು ಸ್ತಬ್ದಗೊಂಡಿವೆ. ಎಟಿಎಂಗಳು ಹಳೆಯ 500 ಹಾಗೂ 1000ಮುಖಬೆಲೆಯ ನೋಟುಗಳನ್ನು ನೀಡುವ ವಿನ್ಯಾಸವನ್ನು ಹೊಂದಿದ್ದು, ಹೊಸನೋಟುಗಳು ಗಾತ್ರದಲ್ಲಿ ಶೇ.26ರಷ್ಟು ಚಿಕ್ಕದಾಗಿವೆ. ಹೀಗಾಗಿ ಎಟಿಎಂಗಳಲ್ಲಿ ಹಣ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ದೈನಂದಿನ ಬಳಕೆಗಳ ವಸ್ತು ಖರೀದಿಗೂ ಇದೀಗ ಬ್ಯಾಂಕ್ ಗೇ ತೆರಳಿ ಹಣ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು. ಮೈಸೂರು ನಗರದ ಹಲವು ಬ್ಯಾಂಕ್ ಗಳಲ್ಲಿ ಶನಿವಾರ ಬ್ಯಾಂಕ್ ತೆರೆಯುವುದಕ್ಕೆ ಮೊದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.

ಪ್ರತಿದಿನ ನಾಲ್ಕುಸಾವಿರದವರೆಗೆ ಹಣ ಬದಲಾವಣೆಗೆ ಅವಕಾಶವಿತ್ತು. ಆದರೆ ಈಗ ತಮ್ಮ ಗುರುತಿನ ಪತ್ರ ತೋರಿಸಿ ಹಣ ಪಡೆದುಕೊಳ್ಳುವವರು ಒಮ್ಮೆ ಮಾತ್ರ ತೆಗೆದುಕೊಳ್ಳಬೇಕು. ಠೇವಣಿಯನ್ನು ಬೇಕಾದರೆ ಮಾಡಬಹುದು ಎನ್ನುತ್ತಿದ್ದಾರೆ ಬ್ಯಾಂಕ್ ಅಧಿಕಾರಿಗಳು. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಅದರಲ್ಲೂ ಹೆಚ್ಚಿನ ಹಣ ಠೇವಣಿ ಮಾಡುತ್ತಿರುವವರ ಕೆಲಸ ಕಾರ್ಯಗಳು ಬೇಗ ಮುಗಿಯುತ್ತಿದ್ದು, ಜನಸಾಮಾನ್ಯರು ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರ ಗೊಣಗಾಟ ಕೇಳಿ ಬರುತ್ತಿದೆ.

ಕೇಂದ್ರ ಸರ್ಕಾರ 500 ಹಾಗೂ 1000ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ, 500 ಹಾಗೂ 2000 ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೆ ತಂದಿದೆ. ಗ್ರಾಹಕರು ತಮ್ಮಲ್ಲಿರುವ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ನೀಡಿ ಹೊಸ ನೋಟುಗಳನ್ನು ಕೊಂಡುಕೊಳ್ಳಲು ಡಿಸೆಂಬರ್ 31ರವರೆಗೆ ಸಮಯ ನಿಗದಿಪಡಿಸಿದೆಯಾದರೂ ಬ್ಯಾಂಕ್ಗಳಲ್ಲಿ ಸಾರ್ವಜನಿಕರು ಹೊಸನೋಟುಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ.

ಮೈಸೂರು ನಗರದ ಪ್ರಮುಖ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಇಂಡಿಯನ್ ಓವರಸೀಸ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಎಚ್.ಡಿ.ಎಫ್.ಸಿ ಬ್ಯಾಂಕ್ ಗಳಲ್ಲಿ ಜನರು ನೂಕು ನುಗ್ಗಲು ಉಂಟಾಗಿದೆ.

ಆದರೆ ಕೆಲವರು ಹಳೆಯ ನೋಟುಗಳ ಬದಲಾವಣೆಗೆ ಡಿಸೆಂಬರ್ 31ರವರೆಗೂ ಸಮಯಾವಕಾಶವಿದ್ದರೂ ಈ ದಿನವೇ ಕೊನೆಯ ದಿನವೆಂಬಂತೆ ವರ್ತಿಸುತ್ತಿರುವುದು ಮಾತ್ರ ಖೇದಕರ. ಅಂಚೆಕಚೇರಿ ಮತ್ತು ಬ್ಯಾಂಕ್ ಗಳಲ್ಲಿ ಜನಜಾತ್ರೆ ಮುಂದುವರಿದಿದೆ.

 

Leave a Reply

comments

Related Articles

error: