ಕರ್ನಾಟಕ

ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ: ಸೆಪ್ಟೆಂಬರ್ ಅಂತ್ಯಕ್ಕೆ 1604 ಕೋಟಿ ರೂ. ಸಾಲ ವಿತರಣೆ

ಮಡಿಕೇರಿ,ನ.22-ಕೊಡಗು ಜಿಲ್ಲೆ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದಿದ್ದು, ಇದನ್ನು ಉಳಿಸಿಕೊಳ್ಳಬೇಕಾದರೆ ಬ್ಯಾಂಕುಗಳು ಹಾಗೂ ಸರ್ಕಾರಿ ಇಲಾಖೆಗಳು ಬಹಳಷ್ಟು ಶ್ರಮವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು.

ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬ್ಯಾಂಕುಗಳ ಜಿಲ್ಲಾ ಸಮನ್ವಯ ಸಮಿತಿ ಹಾಗೂ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಡವರು ಹಾಗೂ ಶ್ರೀಮಂತರ ಅಂತರ ಹೆಚ್ಚಿದ್ದು, ಬ್ಯಾಂಕುಗಳು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ಈ ಅಂತರವನ್ನು ಕಡಿಮೆ ಮಾಡಲು ಸಾಧ್ಯ. ಇದಕ್ಕೆ ಎಲ್ಲಾ ಇಲಾಖಾ ಮುಖ್ಯಸ್ಥರು ಹಾಗೂ ಬ್ಯಾಂಕುಗಳು ಕೈಜೋಡಿಸಬೇಕಿದೆ ಎಂದರು.

ಜಿಲ್ಲೆಯಲ್ಲಿ ಕೃಷಿ ಭೂಮಿ ಹೆಚ್ಚು ಪಾಳು ಬೀಳುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಕೊಡಗು ಜಿಲ್ಲೆ ಕೃಷಿ ರಹಿತ ಜಿಲ್ಲೆಯಾಗಿ ಮಾರ್ಪಾಡುಗೊಂಡು ಗಂಭೀರ ಸ್ಥಿತಿ ಎದುರಿಸಬೇಕಾದೀತು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ, ಸಾಲ ವಿತರಣೆಯಲ್ಲೂ ಸಂಪೂರ್ಣ ಕುಸಿತ ಕಾಣುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಇನ್ನಿತರ ವಲಯಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಕೃಷಿ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಕೃಷಿ ಕ್ಷೇತ್ರವನ್ನು ಉಳಿಸುವ ಹಾಗೂ ಸಮೃದ್ಧವಾಗಿ ಬೆಳೆಸುವಲ್ಲಿ ಎಲ್ಲರೂ ಗಂಭೀರ ಚಿಂತನೆ ಮಾಡಬೇಕಿದೆ ಹಾಗೂ ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.

ನಬಾರ್ಡಿನ ಜಿಲ್ಲಾ ಅಭಿವೃದ್ಧಿ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ನಾಣಯ್ಯ ಅವರು ಪ್ರಸಕ್ತ ವರ್ಷ 2017-18ರ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಜಿಲ್ಲೆಯಲ್ಲಿ ಸಾಲ ವಿತರಣೆ 1604 ಕೋಟಿ ರೂ. ತಲುಪಿದೆ. ಜಿಲ್ಲೆಗೆ ಒಟ್ಟಾರೆಯಾಗಿ 4,400 ಕೋಟಿ ರೂ. ಸಾಲ ವಿತರಣೆಯ ಗುರಿ ನಿಗಧಿಪಡಿಸಿದ್ದು, ಸೆಪ್ಟೆಂಬರ್ ಮಾಸಾಂತ್ಯಕ್ಕೆ 874.91 ಕೋಟಿ ರೂ. ಬೆಳೆ ಸಾಲ, 141.36 ಕೋಟಿ ರೂ. ಕೃಷಿ ಅಭಿವೃದ್ಧಿಯ ಅವಧಿ ಸಾಲ, 21.58 ಕೋಟಿ ರೂ. ಕೃಷಿ ಸಂಬಂಧಿತ ಇತರ ಚಟುವಟಿಕೆಯ ಸಾಲ ಹೀಗೆ ಒಟ್ಟು ಕೃಷಿ ಕ್ಷೇತ್ರಕ್ಕೆ 1037.85 ಕೋಟಿ ರೂ. ಸಾಲ ವಿತರಿಸಲಾಗಿದೆ. ಕೈಗಾರಿಕೆ, ವ್ಯಾಪಾರ ಹಾಗೂ ಸೇವಾ ವಲಯಕ್ಕೆ 318.86 ಕೋಟಿ ರೂ. ಸಾಲ ವಿತರಣೆಯಾಗಿದ್ದು, ಒಟ್ಟು 1603.83 ರೂ. ಸಾಲ ವಿತರಣೆಯೊಂದಿಗೆ ಶೇ.36 ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಕಾರ್ಪೊರೇಷನ್ ಬ್ಯಾಂಕಿನ ಮೈಸೂರಿನ ವಲಯ ಕಚೇರಿಯ ಸಹಾಯಕ ಮಹಾ ಪ್ರಬಂಧಕರಾದ ರಾಮಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಪೊರೇಷನ್ ಬ್ಯಾಂಕಿನ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರಾದ ಬಂಗಾರು ಗುಪ್ತ, ಭಾರತೀಯ ರಿಸರ್ವ್ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ವಿದ್ಯಾಸಾಗರ್, ಕಾರ್ಪೊರೇಷನ್ ಬ್ಯಾಂಕಿನ ಕೂಡಿಗೆಯ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಸುರೇಶ್ ಹಲವು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕು ಪ್ರತಿನಿಧಿಗಳು, ಇಲಾಖಾ ಮುಖ್ಯಸ್ಥರು, ಪ್ರತಿನಿಧಿಗಳು, ಆರ್ಥಿಕ ಸಾಕ್ಷರತಾ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: