ಕರ್ನಾಟಕಪ್ರಮುಖ ಸುದ್ದಿ

ಬೆಳೆಹಾನಿ ನಷ್ಟಕ್ಕೆ ಒಳಗಾದ 24 ಲಕ್ಷ ರೈತರಿಗೆ 1,600 ಕೋಟಿ ರೂ. ಪರಿಹಾರ ನೀಡಲಾಗಿದೆ : ಕಾಗೋಡು ತಿಮ್ಮಪ್ಪ

ರಾಜ್ಯ(ಬೆಳಗಾವಿ)ನ,22:- ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆಹಾನಿ ನಷ್ಟಕ್ಕೆ ಒಳಗಾದ 24 ಲಕ್ಷ ರೈತರಿಗೆ 1,600 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಸದಸ್ಯ ವಿ. ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕಾಗೋಡು ತಿಮ್ಮಪ್ಪ ಮುಂಗಾರು ಮಳೆ ಕೊರತೆ ಹಾಗೂ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ವರದಿ ಬಂದಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚು ಮಳೆಯಿಂದಾಗಿ ಹತ್ತಿ, ತೊಗರಿ, ಮುಸುಕಿನ ಜೋಳ, ಭತ್ತ, ಸೂರ್ಯಕಾಂತಿ, ಇತರೆ ಬೆಳೆಗಳು ಹಾನಿಯಾಗಿದ್ದು, ಒಟ್ಟು 102882 ಹೆಕ್ಟೇರ್ ಪ್ರದೇಶದಲ್ಲಿ ತೀವ್ರ ಬೆಳೆ ಹಾನಿಯಾಗಿತ್ತು ಎಂದು ತಿಳಿಸಿದರು. ಪ್ರಕೃತಿ ವಿಕೋಪದಿಂದ ಶೇ. 33 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆಹಾನಿಯಾದವರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 6,800 ರೂ., ನೀರಾವರಿ ಆಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 1 ಸಾವಿರ ರೂ., ಹಾಗೂ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ. ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದರು. ಈ ನಡುವೆ ಸದಸ್ಯ ಎಂ. ನಾರಾಯಣ ಸ್ವಾಮಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲೂಕು, ಯಲಹಂಕ ಹೋಬಳಿ, ಆವಲಹಳ್ಳಿ ಗ್ರಾಮದ ಸರ್ಕಾರಿ ಜಮೀನು ಒತ್ತುವರಿಯಾಗಿರುವ ಬಗ್ಗೆ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ರೀತಿಯ ಒತ್ತುವರಿ ಆಗಿದ್ದ ಪಕ್ಷದಲ್ಲಿ ತಾವೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು. ಇದಕ್ಕೆ ಮರು ಪ್ರಶ್ನೆ ಹಾಕಿದ ಸದಸ್ಯ ನಾರಾಯಣ ಸ್ವಾಮಿ, ಆರ್.ಟಿ.ಐ. ಕಾರ್ಯಕರ್ತ ಎನ್. ಹನುಮೇಗೌಡ ಎನ್ನುವವರು ಒತ್ತುವರಿಯ ಬಗ್ಗೆ ದೂರು ನೀಡಿದ್ದರಿಂದ ಸ್ಥಳೀಯ ಪ್ರಭಾವಿ ರಾಜಕಾರಣಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಅವರು ನ್ಯಾಯಾಲಯದ ಮೂಲಕ ರಕ್ಷಣೆ ಕೋರಿದ್ದರಿಂದ ಪೊಲೀಸ್ ರಕ್ಷಣೆ ನೀಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಓಡಾಡುವ ವ್ಯಕ್ತಿಯೊಬ್ಬ ಗನ್ ಮ್ಯಾನ್ ರಕ್ಷಣೆ ಪಡೆದಿರುವುದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: