ಕರ್ನಾಟಕಪ್ರಮುಖ ಸುದ್ದಿ

ನೈಸ್ ಅವ್ಯವಹಾರಗಳ ಬಗ್ಗೆ ಸದನ ಸಮಿತಿಯ ವರದಿ ಮಂಡನೆಯಾಗಿ ಒಂದು ವರ್ಷವಾದರೂ ಯಾವುದೇ ಕ್ರಮ ಆಗಿಲ್ಲ : ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ(ಬೆಳಗಾವಿ)ನ.22:-  ಬೆಂಗಳೂರು-ಮೈಸೂರು ಕಾರಿಡಾರ್ ರಸ್ತೆ ನಿರ್ಮಾಣದಲ್ಲಿ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಯ ಒಪ್ಪಂದವನ್ನು ರದ್ದುಗೊಳಿಸಿ ಇಡೀ ಯೋಜನೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನನ್ನು ರೂಪಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಆಗ್ರಹಿಸಿದರು.

ನೈಸ್ ಅವ್ಯವಹಾರಗಳ ಬಗ್ಗೆ ಸದನ ಸಮಿತಿಯ ವರದಿ ಮಂಡನೆಯಾಗಿ ಒಂದು ವರ್ಷವಾದರೂ ಯಾವುದೇ ಕ್ರಮ ಆಗಿಲ್ಲ. ಕ್ರಮ ತೆಗದುಕೊಳ್ಳಲು ನಿಮಗೆ ಇರುವ ಅಡಚಣೆ ಏನು ಈ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆ. ಈ ನೈಸ್ ಕಂಪೆನಿಯನ್ನು ಸರ್ಕಾರವೇ ಸುಪರ್ದಿಗೆ ತೆಗೆದುಕೊಂಡು ಇಡೀ ಯೋಜನೆಯನ್ನು ತನ್ನ ವಶಕ್ಕೆ ಪಡೆಯುವ ಅಗತ್ಯವಿದೆ ಎಂದು ನೈಸ್ ಕುರಿತ ಸದನ ಸಮಿತಿ ವರದಿ ಮೇಲೆ ನಡೆದ ಚರ್ಚೆಯಲ್ಲಿ ಹೇಳಿದರು. ನೈಸ್ ಕಂಪೆನಿ ಸರ್ಕಾರದ ವಿರುದ್ಧವೇ ತೊಡೆ ತಟ್ಟಿದೆ. ಈ ಸಂಸ್ಥೆಗೆ ಕಡಿವಾಣ ಹಾಕುವ ಶಕ್ತಿ ಸರ್ಕಾರಕ್ಕಿಲ್ಲವೆ. ನ್ಯಾಯಾಲಯದಿಂದ ಎಲ್ಲದಕ್ಕೂ ತಡೆ ತರುತ್ತಾರೆ ಎನ್ನುವುದಾದರೆ ನ್ಯಾಯಾಲಯದ ಅದೇಶವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಎಂದು ಒತ್ತಾಯಿಸಿದರು. ನೈಸ್ ಹಗರಣದ ಸದನ ಸಮಿತಿ ವರದಿ ಶೈತ್ಯಾಗಾರದಲ್ಲಿದೆ. ಶೈತ್ಯಾಗಾರದಲ್ಲಿ ಈ ವರದಿ ಇಡಲು ಸದನ ಸಮಿತಿ ರಚಿಸಬೇಕಿತ್ತು. ತೋರುಗಾಣಿಕೆಗೆ ಈ ವರದಿಯನ್ನು ಮಂಡಿಸುವ ಅಗತ್ಯ ಇರಲಿಲ್ಲ. ಈ ವರದಿ ಬಗ್ಗೆ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಕಂಪೆನಿಯ ಮಾಲೀಕ ದುಡ್ಡು ಮಾಡಲು ಅವಕಾಶ ಮಾಡಿಕೊಡಬೇಡಿ. ಈ ಯೋಜನೆಯನ್ನು ವಶಕ್ಕೆ ಪಡೆದು ಅದರಿಂದ ಬರುವ ಆದಾಯವನ್ನು ಉತ್ತರಕರ್ನಾಟಕದ ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಿ ನಮ್ಮದೇನು ಅಭ್ಯಂತರವಿಲ್ಲ. ಆದರೆ, ರೈತರಿಗೆ ಯೋಜನೆ ಹೆಸರಿನಲ್ಲಿ ಯಾಮಾರಿಸಿ ಯಾವುದೋ ಕಂಪೆನಿ ಹಣ ಮಾಡಲು ಬಿಡುವುದು ಬೇಡ. ಈ ಕಂಪೆನಿಯ ಮುಖ್ಯಸ್ಥರು ವಿಧಾನಸಭೆ ಸದಸ್ಯರಿದ್ದಾರೆ. ಅವರು ಸದನದಲ್ಲಿ ಈಗ ಇರಬೇಕಿತ್ತು. ಅವರು ಯಾರನ್ನು ಓಲೈಸಿ, ಏನೇನು ಮಾಡಿದರು ಎಂಬುದು ನಮಗೂ ಗೊತ್ತಿದೆ ಎಂದು ಪರೋಕ್ಷವಾಗಿ ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ದ ವಾಗ್ದಾಳಿ ನಡೆಸಿದರು. ಇದಕ್ಕೆ ದ್ವನಿಗೂಡಸಿದ ಜೆಡಿಎಸ್‌ನ ಶಿವಲಿಂಗೇಗೌಡ ಅವರು, ಸದನ ಸಮಿತಿಯ ವರದಿ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿದರು.

ಸದನ ಸಮಿತಿಯ ವರದಿ ಅನುಷ್ಠಾನಗೊಳಿಸುವಂತೆ ಬಿಜೆಪಿಯ ವಿಶ್ವನಾಥ್, ಸತೀಶ್‌ರೆಡ್ಡಿ, ಕಾಂಗ್ರೆಸ್‌ನ ಎಸ್.ಟಿ. ಸೋಮಶೇಖರ್ ಒತ್ತಾಯಿಸಿ, ನೈಸ್ ಕಂಪೆನಿಯ ಅವ್ಯವಹಾರಗಳನ್ನು ಸದನದಲ್ಲಿ ಬಿಡಿಸಿಟ್ಟರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: