ಪ್ರಮುಖ ಸುದ್ದಿಮೈಸೂರು

ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಇನ್ನಿಲ್ಲ : ಗಣ್ಯರಿಂದ ಅಂತಿಮ ದರ್ಶನ

ಮೈಸೂರು,ನ.23-ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ, `ಆಂದೋಲನ’ ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರ ಅಗಲಿಕೆ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ರಾಜಶೇಖರ ಕೋಟಿಯವರು ಮೂಲತಃ ಗದಗ್ ಜಿಲ್ಲೆ ಹುಯಿಲಗೋಳದವರು. ರಾಜಶೇಖರ ಕೋಟಿ ಜಮೀನ್ದಾರ್ ಕುಟುಂಬದಿಂದ ಬಂದವರು. ಗದಗ್ ನಲ್ಲಿ ವಿದ್ಯಾಭ್ಯಾಸ ಮಾಡಿರುವ ಕೋಟಿಯವರಿಗೆ ಶಾಲಾ ದಿನದಿಂದಲೇ ಪತ್ರಿಕೆ ಬಗ್ಗೆ ಆಸಕ್ತಿ ಹೊಂದಿದ್ದರು. ಅಚ್ಚು ಮೊಳೆ ಸಹಾಯಕರಾಗಿ ಕೆಲಸ ಆರಂಭಿಸಿದ ಕೋಟಿಯವರು ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ 2 ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕಾದಂಬರಿಕಾರ ಬಸವರಾಜ ಕಟ್ಟಿಮನಿ ಕೋಟಿ ಅವರ ಕೆಲಸ ಮೆಚ್ಚಿ ಅವಕಾಶ ನೀಡಿದ್ದರು. ಸಂಬಳ ಪಡೆಯದೆ ಕೆಲಸ ಮಾಡಿದ್ದರು.

ಧಾರವಾಡಕ್ಕೆ ಬರುತ್ತಿದ್ದ ಸಮಾಜವಾದಿಗಳಿಂದ ಪ್ರಭಾವಿತರಾಗಿದ್ದ ಕೋಟಿಯವರು ಪೂರ್ಣ ಚಂದ್ರ ತೇಜಸ್ವಿ, ಶಾಂತವೇರಿ ಗೋಪಾಲಕೃಷ್ಣ ಜೆ.ಎಚ್.ಪಟೇಲ್, ಪ್ರೊ.ಎಂ.ಡಿ ನಂಜುಂಡಸ್ವಾಮಿ, ಎಂ.ಡಿ ಸುಂದರೇಶ್, ಪ್ರೊ.ರಾಮದಾಸ್, ಕಡಿದಾಳ ಶಾಮಣ್ಣ ಅವರಿಂದ ಪ್ರಭಾವಿತರಾಗಿದ್ದರು. ಅವರ ಸಿದ್ದಾಂತದ ಬಗ್ಗೆ ಒಲವು ಹೊಂದಿದ್ದರು. ಸಮಾಜವಾದಿ ಯೋಜನ್ ಸಭಾದ ಸಕ್ರಿಯ ಸದಸ್ಯರಾದ ಕೋಟಿಯವರಿಗೆ ಧಾರವಾಡದಿಂದ ಮೈಸೂರಿಗೆ ಬರಲು ಅವಕಾಶ ಸಿಕ್ಕಿತು. ಆದರೆ ಧಾರವಾಡದಿಂದ ಮೈಸೂರಿಗೆ ಬರಲು ಕೋಟಿ ಮನೆಯವರು ಒಪ್ಪಿರಲಿಲ್ಲ. ಮನೆಯವರಿಗೆ ಸುಳ್ಳು ಹೇಳಿ ಮೈಸೂರಿಗೆ ಬಂದರು.

ಮನೆಯವರಿಗೆ ವಾಪಸ್ಸು ಬರುವುದಾಗಿ ಸುಳ್ಳು ಹೇಳಿ ಒಂದು ಚೀಲ, ಉಟ್ಟ ಬಟ್ಟೆ ಪತ್ರಿಕೆಯ ಕೆಲ ವಸ್ತುಗಳೊಡನೆ ಮೈಸೂರಿಗೆ ಬಂದರು. ಗೆಳೆಯರಾದ ನೆಲೆಮನೆ ದೇವೇಗೌಡರು, ದೇವನೂರು ಮಹದೇವ್, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಇವರಿಗೆ ಸಹಕಾರ ನೀಡಿದರು. ಪತ್ರಿಕೆಗಾಗಿ ಪ್ರಕಾಶಕರಾದ ನೆಲೆ ಮನೆ ದೇವೇಗೌಡರು ಹಾಗೂ ಸ್ನೇಹಿತರ ಸಹಾಯದಿಂದ ಜಾದುಗಾರ ಮೈಸೂರು ನಾಗೇಶ್ ಬಳಿ ಅಚ್ಚುಮೊಳೆ ಜೋಡಿಸುವ ಸಾಧನ, ಮುದ್ರಣ ಯಂತ್ರವನ್ನು 1850  ರೂ.ಗೆ ಖರೀದಿಸಿದರು.

ಹಿರಿಯ ಪತ್ರಕರ್ತ ರಾಮದೇವರು ರಾಕಿ ಜೊತೆಗೆ ಕೆಲಸ ಆರಂಭಿಸಿ ಸುಧಾ ಮಾದರಿಯ ವಾರಪತ್ರಿಕೆ ಹೊರ ತಂದರು. ಪ್ರಸಾರ ಹೆಚ್ಚಾದಂತೆ ಬೇರೆ ಪ್ರೆಸ್‌‌ನಲ್ಲಿ ಮುದ್ರಣ ಆರಂಭಿಸಿದರು. ಜೆ.ಪಿ ಚಳವಳಿಯ ಸಮಯದಲ್ಲಿ ಅದರ ಮುಖವಾಣಿಯಂತೆ ಪತ್ರಿಕೆ ಕೆಲಸ ಮಾಡಿತ್ತು. ತುರ್ತು ಪರಿಸ್ಥಿತಿ ಘೋಷಣೆಯಾದ ಸಮಯದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಪತ್ರಿಕೆಯ ಬರಹಗಳ ಮೂಲಕ ಹೋರಾಟ ಮಾಡಿದರೂ ಸಹ ಅನಿವಾರ್ಯವಾಗಿ ಪತ್ರಿಕೆಯನ್ನು ನಿಲ್ಲಿಸಿದ್ದರು.

ಮೈಸೂರಿನ ಜಯಮ್ಮ ಗೋವಿಂದೇಗೌಡ ಕನ್ವೆನ್ಶನ್ ಸೆಂಟರ್ ನಲ್ಲಿ ನ.18 ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಶೇಖರ ಕೋಟಿ.

ಪ್ರಿಂಟಿಂಗ್, ವರದಿಗಾರಿಕೆ ಪತ್ರಿಕೆ ವಿತರಣೆ ಸೇರಿದಂತೆ ಪತ್ರಿಕೆಯ ಎಲ್ಲಾ ಕೆಲಸ ಮಾಡಿದ್ದ ಕೋಟಿಯವರು ಪತ್ರಿಕೆಯನ್ನೇ ಮೊದಲ ಮಗು ಎಂದುಕೊಂಡಿದ್ದರು. ಮೈಸೂರಿನಲ್ಲಿ ಮಯೂರ ಮುದ್ರಣದಲ್ಲಿ ಪತ್ರಿಕೆಯ ಮುದ್ರಣವಾಗುತ್ತಿತ್ತು. ವೀರಪ್ಪನ್ ಪ್ರಕರಣದಲ್ಲಿ ನಂಬರ್ ಒನ್ ಆದ ಆಂದೋಲನ ಪತ್ರಿಕೆ ಪೊಲೀಸರ ಕಾರ್ಯಾಚರಣೆ ನಿಖರವಾಗಿ ಪ್ರಕಟಿಸಿದ ಹೆಗ್ಗಳಿಕೆ ಪಡೆದುಕೊಂಡಿದೆ.

ನಗರದ ಲಲಿತ್‌ಮಹಲ್ ಈಜು ಕೊಳದಲ್ಲಿ ಡಿಸಿಪಿ ಸೋಮಶೇಖರ್ ಕಾಲದ ಸತ್ಯದೇವ್ ಕೊಲೆ ಪ್ರಕರಣದ ಬಗ್ಗೆ ಪತ್ರಿಕೆಯಲ್ಲಿ ತನಿಖಾ ವರದಿ ಪ್ರಕಟಿಸಿತ್ತು. ಆಂದೋಲನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ತನಿಖಾ ವರದಿ ಮಾಡಿದ್ದರು. ಸತ್ಯದೇವ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಂಶಿಪ್ರಸನ್ನ ಕುಮಾರ್ ಮಾಡಿದ್ದ ಯಾವುದೇ ಅಂಜಿಕೆ ಅಳುಕಿಲ್ಲದೆ ಕೋಟಿಯವರು ವರದಿಯನ್ನು ಪ್ರಕಟಿಸಿದ್ದರು.

ಪೊಲೀಸ್ ಇಲಾಖೆಯ ಅಧಿಕಾರಿ ಸೋಮಶೇಖರ್ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ವರದಿಯನ್ನು ನೋಡಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿತ್ತು. ನಗರ ಪೊಲೀಸ್ ಆಯುಕ್ತ ಪ್ರಕರಣದ ಬಗ್ಗೆ ನಡೆಸಿದ ತನಿಖೆಯಲ್ಲಿ ಡಿಸಿಪಿ ಸೋಮಶೇಖರ್ ಕೊಲೆಗಾರ ಅಂತಾ ಸಾಬೀತಾಯಿತು. ಪ್ರಕರಣದಲ್ಲಿ ವಸ್ತುನಿಷ್ಠ ಸತ್ಯವರದಿ ಮಾಡಿದ ಹೆಗ್ಗಳಿಕೆಗೆ ಪತ್ರಿಕೆ ಪಾತ್ರವಾಯಿತು.

ಸಮಾಜವಾದಿ ಚಳವಳಿಯಿಂದ ಪ್ರಭಾವಿತರಾಗಿ ೧೯೭೨ರಲ್ಲಿ `ಆಂದೋಲನ’ ಪತ್ರಿಕೆ ಆರಂಭಿಸಿದ ಕೋಟಿಯವರು ಯುವಜನರ ವಾರಪತ್ರಿಕೆಯಾಗಿ ಆಂದೋಲನವನ್ನು ಆರಂಭಿಸಿದ್ದರು. ಕನ್ನಡಪರ ಹೆಸರು ಇಡಲು ಚಿಂತನೆ ನಡೆಸಿದ್ದ ಕೋಟಿಯವರು ಕನ್ನಡದ ಸಾಕಷ್ಟು ಹೆಸರುಗಳನ್ನು ನೋಂದಾಣಿಗೆ ಕಳುಹಿಸಿದ್ದರು. ಆದರೆ ಅಂತಿಮವಾಗಿ ಆಂದೋಲನ ಹೆಸರು ನೋಂದಣಿಯಾಯಿತು.

ಸುಮಾರು 42 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ರಾಜಶೇಖರ ಕೋಟಿ ಜಿಲ್ಲಾ ಹಾಗೂ ಪ್ರಾದೇಶಿಕ ಮಟ್ಟದ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ಅದ್ವೀತಿಯವಾದುದು. ಇಡಿ ರಾಜ್ಯದಲ್ಲೇ ಅತ್ಯಂತ ಯಶಸ್ವಿ ಪ್ರಾದೇಶಿಕ ದಿನಪತ್ರಿಕೆಯಾದ `ಆಂದೋಲನ’ವನ್ನು ಕಟ್ಟಿ ಬೆಳೆಸಿದ ಹಿರಿಮೆ ಅವರದು. ಯಾವುದೇ ರಾಜ್ಯಮಟ್ಟದ ಪತ್ರಿಕೆಗೂ ಸಾಟಿ ಎನ್ನುವ ರೀತಿಯಲ್ಲಿ ಅತ್ಯಾಧುನಿಕ ಮುದ್ರಣ ವ್ಯವಸ್ಥೆ, ಸುದ್ದಿಗಳ ವೈವಿಧ್ಯತೆ ಹಾಗೂ ವಿಶಿಷ್ಟತೆಯೊಂದಿಗೆ ಆಂದೋಲನ ದಿನಪತ್ರಿಕೆಯನ್ನು ಹೊರುತರುತ್ತಿದ್ದರು.

ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನ.18 ರಂದು ನಡೆದ ಜಾನಪದ ಸಿರಿ ಕಾರ್ಯಕ್ರಮದಲ್ಲಿ ರಾಜಶೇಖರ ಕೋಟಿಯವರನ್ನು ಕಾಣಬಹುದು.

ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಾಕವಾಗಿ ಹಾಗೂ ಬೆಂಗಳೂರು ಗ್ರಾಮಾಂತರ ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರಸಾರವಿರುವ ಆಂದೋಲನ ದಿನಪತ್ರಿಕೆಯ ಮೂಲಕ ಈ ಜಿಲ್ಲೆಗಳ ಜನತೆಯ ಧ್ವನಿಯಾಗಿದ್ದಾರೆ ಕೋಟಿಯವರು. ಈ ಜಿಲ್ಲೆಗಳ ಜನತೆಯಲ್ಲಿ ಪತ್ರಿಕೆ ಓದುವ ಅಭಿರುಚಿ ಬೆಳೆಸಿರುವುದರ ಜತೆಗೆ, ಜನರ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಇಲ್ಲಿನ ಅಭಿವೃದ್ಧಿ ಚಟುವಟಿಕೆಗಳಿಗೆ, ಆಗು ಹೋಗುಗಳಿಗೆ ಆದ್ಯತೆ ಕೊಡುವ ಮೂಲಕ ನಾಡು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಶೋಷಿತರು ಹಾಗೂ ದುಡಿಯುವ ವರ್ಗದ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕೋಟಿಯವರು ತಮ್ಮ ಪತ್ರಿಕೆಗಳ ಮೂಲಕ ಈ ಜನರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ತಮ್ಮ ಪತ್ರಿಕೆಯಲ್ಲಿ ಓದುಗರ ಅಂಕಣವನ್ನು ಅತ್ಯಂತ ಜನಪ್ರಿಯಗೊಳಿಸಿದ ಹಿರಿಮೆ ಅವರದು. ಕನ್ನಡ ಅಂಕಿಗಳನ್ನು ಬಳಸಿಯೂ ಪತ್ರಿಕೆಯ ಜನಪ್ರಿಯತೆ ಉಳಿಸಿಕೊಂಡಿರುವುದು ಅವರ ಹೆಗ್ಗಳಿಕೆಯಾಗಿದೆ.

ತಮ್ಮ `ಇದ್ದದ್ದು ಇದ್ಹಾಂಗ’ ಅಂಕಣದ ಮೂಲಕ ನೇರ-ಸತ್ಯ-ನಿಷ್ಠುರ ಬರಹಗಳಿಗೆ ಹೆಸರಾಗಿದ್ದ ಕೋಟಿಯವರು ಬರವಣಿಗೆಯಂತೆಯೇ ಜನರಲ್ಲಿ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸುವಂತಹ ಭಾಷಣಗಳಿಗೂ ಖ್ಯಾತರಾಗಿದ್ದರು. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳ ಜನರಲ್ಲಿ ಅವರು ತಮ್ಮ ಬರವಣಿಗೆ-ಭಾಷಣಗಳಿಂದ ಚಿರಪರಿಚಿತರು.

ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಕೋಟಿಯವರ ಕೊಡುಗೆ ಅಪಾರವಾದುದು. ಪ್ರಖ್ಯಾತ ಪತ್ರಿಕೋದ್ಯಮಿ ಪಾಟೀಲ ಪುಟ್ಟಪ್ಪನವರ ಪ್ರಪಂಚ ಹಾಗೂ ವಿಶ್ವವಾಣಿ ಪತ್ರಿಕೆಗಳನ್ನು ಓದುತ್ತಿರುವಾಗಲೇ ಕಾರ್ಯ ನಿರ್ವಹಿಸಿ ಅವರ ಗರಡಿಯಲ್ಲಿ ತಯಾರಾಗಿರುವ ಕೋಟಿಯವರು, ಅವರ ಹಾಗೆಯೇ ಅಪಾರವಾದ ಶಿಷ್ಯಕೋಟಿಯನ್ನು ಹೊಂದಿದವರಾಗಿದ್ದಾರೆ. ಕೋಟಿಯವರ ಗರಡಿಯಲ್ಲಿ ತಯಾರಾದ ಐವತ್ತಕ್ಕೂ ಹೆಚ್ಚು ಪತ್ರಕರ್ತರು ಇಂದು ದೊಡ್ಡ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ತಮ್ಮ ಪತ್ರಿಕೆಗಳ ಹಾಗೆಯೇ ಎಲ್ಲ ಜಿಲ್ಲೆಗಳಲ್ಲೂ ಒಳ್ಳೆಯ ಪತ್ರಿಕೆಗಳು ಅಭಿವೃದ್ಧಿ ಹೊಂದಲೆಂಬ ಕಾಳಜಿಯುಳ್ಳವರಾಗಿದ್ದರು. ಈ ಉದ್ದೇಶದಿಂದಲೇ ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟು ಪ್ರತಿ ವರ್ಷ ಜಿಲ್ಲಾಮಟ್ಟದ ಅತ್ಯುತ್ತಮ ಪತ್ರಿಕೆಗೆ ಪುರಸ್ಕಾರ ನೀಡುವ ಪರಿಪಾಠ ಆರಂಭಿಸಿದ ಮೊದಲಿಗರಾಗಿದ್ದಾರೆ.

ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ, ಅಪಘಾತಗಳು ಜರುಗಿದಾಗ ಪತ್ರಿಕೆಯ ಓದುಗರಿಂದ ನಿಧಿ ಸಂಗ್ರಹಿಸಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವುದು ಕೋಟಿಯವರ ಪತ್ರಿಕಾ ಸಮೂಹದ ಅವಿಭಾಜ್ಯ ಅಂಗವಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 26.35 ಲಕ್ಷ ರೂ. ಗಳಷ್ಟು ಹಣ ಸಂಗ್ರಹಿಸಿದ ಹೃದಯವಂತರು ಕೋಟಿಯವರು. ಸುನಾಮಿ ಸಂತ್ರಸ್ತರಿಗಾಗಿ 12 ಲಕ್ಷ ರೂ. ಗಳಷ್ಟು ನಿಧಿ ಸಂಗ್ರಹಿಸಿ ಕಡಲೂರು ಬಳಿ `ಮೈಸೂರು ಕಾಲೋನಿ’ ನಿರ್ಮಿಸುವ ಮೈಸೂರಿಗರ ಪ್ರಯತ್ನದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಆಸರೆಗಾಗಿ 20 ಲಕ್ಷ ರೂ.ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.

ತಮ್ಮ ಪತ್ರಿಕೆಯ ಆದಾಯದಲ್ಲಿ ಬಹುಪಾಲನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದ ಹಿರಿಮೆ ಕೋಟಿಯವರಿಗೆ ಸಲ್ಲುತ್ತದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ 21 ಬಸ್ ತಂಗುದಾಣಗಳನ್ನು ಕಟ್ಟಿಸಿರುವ ಇವರು, ಗ್ರಾಮಾಂತರ ಪ್ರದೇಶದ ಹಲವಾರು ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ನೀಡಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರಾಯೋಜಿಸಿದ್ದರು. ಮೈಸೂರಿನ ರೋಟರಿ ಪಶ್ಚಿಮ ಹಾಗೂ ಲಯನ್ಸ್ ಐಕಾನ್ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಗೌರದ ಸದಸ್ಯರಾಗಿ ಸೇವಾ ಕಾರ್ಯಗಳಲ್ಲಿ ಅವುಗಳೊಂದಿಗೆ ಸಹಕರಿಸುತ್ತಿದ್ದರು. ಮೈಸೂರಿನ ಎಂ.ಜಿ.ರಸ್ತೆಯ ತರಕಾರಿ ಬೆಳೆಯುವ ಸಣ್ಣ ರೈತರು ಹಾಗೂ ಮಾರುವವರಿಗೆ ನೀರಿನ ಸೌಲಭ್ಯ ಒದಗಿಸಿದ್ದಲ್ಲದೆ, ಅವರ ಶಾಶ್ವತ ನೆಲೆಗಾಗಿ ಶ್ರಮಿಸಿದ್ದರು.

ಕ್ರೀಡಾ ಚಟುವಟಿಕೆಗಳಿಗೂ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದ ಕೋಟಿಯವರು, ಮೈಸೂರಿನಲ್ಲಿ ಪ್ರತಿ ವರ್ಷವೂ ರಾಜ್ಯಮಟ್ಟದ ಕಿರಿಯರ ಟೆನಿಸ್ ಪಂದ್ಯಾವಳಿಯನ್ನು, ಗಾಲ್ಫ್ ಪಂದ್ಯಾವಳಿಯನ್ನು ಪ್ರಾಯೋಜಿಸುತ್ತಾ ಬಂದಿದ್ದರು. ಮೈಸೂರು ವಿವಿಯ ಕ್ರೀಡಾ ವಿಭಾಗದವರ ಜತೆಗೂಡಿ ಧ್ಯಾನಚಂದ್ ಅವರ ನೆನಪಿನಲ್ಲಿ ಆಂದೋಲನ ಕಪ್ ಹಾಕಿ ಪಂದ್ಯಾವಳಿಯನ್ನು ಪ್ರಾಯೋಜಿಸಿಕೊಂಡು ಬಂದಿದ್ದಾರೆ. ಮೈಸೂರಿನಲ್ಲಿ ನಡೆದ ಒಂದು ದಿನದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಪಂದ್ಯದ ಪ್ರಾಯೋಜಕರಲ್ಲಿ ಕೋಟಿಯವರು ಒಬ್ಬರಾಗಿದ್ದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸತತ ಎರಡು ಅವಧಿಗಳಲ್ಲಿ ಕಾರ್ಯ ನಿರ್ವಹಿಸಿರುವ ಕೋಟಿಯವರು ಮೈಸೂರು ಕಾರ್ಯ ಪಡೆದು ಸದಸ್ಯರಾಗಿ ಮೈಸೂರಿನ ವ್ಯವಸ್ಥಿತ ಬೆಳವಣಿಗೆಗೆ ನೆರವಾಗಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ನಾಲ್ಕು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಕರ್ನಾಟಕ ಸರ್ಕಾರದ ಪತ್ರಕರ್ತರ ಮಾನ್ಯತಾ ಸಮಿತಿಯಲ್ಲಿ ಎರಡು ಅವಧಿಗೆ ಸದಸ್ಯರಾಗಿ ಕೋಟಿಯವರು ಕಾರ್ಯನಿರ್ವಹಿಸಿದ್ದಾರೆ.

ಕೋಟಿಯವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ರೋಟರಿ ಸುಪ್ರೀಂ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಜನಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಟಿಎಸ್ ಆರ್ ಪ್ರಶಸ್ತಿಗಳಲ್ಲದೆ, ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಅಭ್ಯುದಯ ಪತ್ರಿಕೋದ್ಯಮ ಪ್ರೋತ್ಸಾಹಕ (ಮೆಂಟರ್) ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿಯಲ್ಲಿ ಪತ್ರಿಕೆಯ ಶಾಖಾ ಕಚೇರಿಗಳನ್ನು ಹೊಂದಿರುವ ಕೋಟಿಯವರು 80ಕ್ಕೂ ಹೆಚ್ಚು ಸಿಬ್ಬಂದಿಗೆ ನೇರವಾಗಿ ಉದ್ಯೋಗ ಒದಗಿಸಿದ್ದಾರೆ. ಜಪಾನ್, ಸಿಂಗಪೂರ್, ಹಾಂಕಾಂಗ್, ಥೈಲ್ಯಾಂಡ್, ಮಲೇಷಿಯಾ, ನೇಪಾಳ್, ದುಬೈ ಅಬುದಾಬಿ ಹಾಗೂ ಶ್ರೀಲಂಕಾ ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಪತ್ರಿಕೆಗಳ ಕಾರ್ಯ ವಿಧಾನವನ್ನು ಸ್ವತಃ ವೀಕ್ಷಿಸಿ ಅನುಭವ ಪಡೆದು ಬಂದವರಾಗಿದ್ದಾರೆ.

ನ.18ರಂದು ಮೈಸೂರು ಅಧ್ಯಾಯ ಆರ್ ಟಿಐ, ಎಲ್.ಸಿ. ಇಂಡಿಯಾ, ಮೈಸೂರು ಹೆರಿಟೇಜ್ ರೌಂಡ್ ಟೇಬಲ್ 109 ಮತ್ತು ಮೈಸೂರು ಹೆರಿಟೇಜ್ ಲೇಡೀಸ್ ಸರ್ಕಲ್ 109ರ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನ ಮಕ್ಕಳಿಗಾಗಿ ನಗರದ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಜಾನಪದ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ ಮತ್ತು ಜಾನಪದ ಸಿರಿ ವೇದಿಕೆ ವತಿಯಿಂದ ಜಾನಪದ ಸಿರಿ ವೇದಿಕೆ ಉದ್ಘಾಟನೆ ಮತ್ತು ನಿರ್ಲಕ್ಷಿತ ಜನಪದ ಕಲಾವಿದರಿಂದ ಹಾಡುಗಾರಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಜನಮಾನಸದಲ್ಲಿ ಇನ್ನೂ ಹಸಿರಾಗಿರುವಾಗಲೇ ಕೋಟಿಯವರು ಇಹಲೋಕ ತ್ಯಜಿಸಿರುವುದು ವಿಷಾದನೀಯ.

ಗಣ್ಯರು, ಸಂಘ-ಸಂಸ್ಥೆಗಳವರು, ಪತ್ರಕರ್ತರು ಸೇರಿದಂತೆ ನೂರಾರು ಮಂದಿ ರಾಜಶೇಖರ ಕೋಟಿಯವರ ಅಂತಿಮ ದರ್ಶನ ಪಡೆದರು. (ವರದಿ-ಕೆ.ಎಸ್, ಎಂ.ಎನ್)

 

 

 

Leave a Reply

comments

Related Articles

error: