ಮೈಸೂರು

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನೌಕರರದ್ದು : ಮಹದೇವಪ್ಪ

ಸರ್ಕಾರ ರೂಪಿಸಿದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ನೌಕರರ ಪಾತ್ರ ಹಿರಿದಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ  ಮೈಸೂರಿನ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ 2015-16ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೌಕರರ ಸೇವಾ ರತ್ನ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು  ನೌಕರರು ಪ್ರಜಾಪ್ರಭುತ್ವ ಆಧಾರದ ಸ್ತಂಭಗಳಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಾಂಗದ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲ ದ್ರವ್ಯಗಳಾಗಿದ್ದಾರೆ ಎಂದರು.

ಸರ್ಕಾರ ರೂಪಿಸಿದ  ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ  ಜವಬ್ದಾರಿ ನೌಕರರ ಮೇಲಿದೆ. ಅಷ್ಟೇ ಅಲ್ಲದೇ  ಯೋಜನೆಗಳನ್ನು ಜನ ಸಾಮಾನ್ಯರರಿಗೆ ತಲುಪಿಸಿ ಅದನ್ನು ಯಶಸ್ವಿಗೊಳಿಸುವಲ್ಲಿಯೂ ನೌಕರರ ಪಾತ್ರ ಹಿರಿದು ಎಂದರು.

ನೌಕರರ ಬೇಡಿಕೆಯಲ್ಲೊಂದಾದ ಏಳನೇ ವೇತನ ಆಯೋಗ ಪರಿಷ್ಕರಣೆ ಮತ್ತು ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆಂದು ತಿಳಿಸಿದರು.

ನೌಕರರ ಮಕ್ಕಳು ಶಿಕ್ಷಣ ಪಡೆಯಲು ಎಲ್ಲಾ ರೀತಿಯ ಸೌಲಭ್ಯಗಳಿವೆ. ಮಕ್ಕಳು ತಮ್ಮ ಪ್ರತಿಭೆಗಳಿಂದ ಉನ್ನತ ಪರೀಕ್ಷೆಗಳನ್ನು ಬರೆದು ಉನ್ನತ ಸ್ಥಾನಕ್ಕೆ ಹೋಗುತ್ತಿದ್ದಾರೆ. ಪ್ರತಿಭೆ ಇರುವ ಮಕ್ಕಳಿಗೆ ಉತ್ತಮ ಗುರು ದೊರೆತರೆ  ಅವರು ತಮ್ಮ ಗುರಿಯನ್ನು ತಲುಪುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ನೌಕರರಿಗೆ ಸೇವಾ ರತ್ನ ಪ್ರಶಸ್ತಿ ಮತ್ತು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಸಕರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ವಾಸು, ಎಚ್.ಬಿ.ಮಂಜುನಾಥ್, ಕೆ.ವೆಂಕಟೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಕೇಂದ್ರ ಸಂಘದ ಗೌರವಾಧ್ಯಕ್ಷ ಎಚ್.ಕೆ.ರಾಮು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: