ಮೈಸೂರು

ಕನ್ನಡ ಪ್ರತಿಮನೆಯಲ್ಲೂ ಅನಾವರಣ-ಅನುರಣವಾಗಬೇಕು : ಸಾಹಿತಿ ಡಾ.ದೊಡ್ಡರಂಗೇಗೌಡ

sammelana-web-2ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಪ್ರತಿಯೊಂದು ಮನೆಯಲ್ಲಿಯೂ ಕನ್ನಡ ಅನಾವರಣ ಮತ್ತು ಅನುರಣವಾಗಬೇಕು ಎಂದು ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ತಿಳಿಸಿದರು.

ಮೈಸೂರಿನ ಆಲನಹಳ್ಳಿಯಲ್ಲಿ ತಾಲೂಕಿನ ಕನ್ನಡಪರ ಸಂಘಟನೆಗಳು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ  ಮೈಸೂರು ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೊಡ್ಡರಂಗೇಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ಮಕ್ಕಳು ಜಗತ್ತಿನ ಎಲ್ಲಾ ಭಾಷೆಗಳನ್ನೂ ಕಲಿಯಲಿ. ಆದರೆ ಕನ್ನಡವನ್ನು ದೂರಕ್ಕೆ ತಳ್ಳುವುದು ಸರಿಯಲ್ಲ. ದೇಶ ಭಾಷೆ ಇದ್ದರೆ ಮಾತ್ರ ನಾವುಗಳು ಉಳಿಯುತ್ತೇವೆ. ಇಲ್ಲದೇ ಹೋದರೆ ನಮ್ಮ ಅಸ್ತಿತ್ವವೇ ಇರುವುದಿಲ್ಲ ಎಂದರು.

ಕನ್ನಡನಾಡಿನಲ್ಲಿ ಕನ್ನಡದಲ್ಲಿಯೇ ಸಹಿ ಹಾಕುವ ದೊಡ್ಡ ಚಳುವಳಿಯಾಗಬೇಕು. ಸಹಿ ನಮ್ಮ ವ್ಯಕ್ತಿತ್ವದ ಸಂಕೇತ. ಇಂತಹುದನ್ನು ಗುಲಾಮಗಿರಿ ಇಂಗ್ಲೀಷ್ ನಲ್ಲಿ ಯಾಕೆ ಮಾಡಬೇಕು. ಅದಕ್ಕಾಗಿ ಕನ್ನಡದಲ್ಲಿಯೇ ಸಹಿ ಮಾಡುವ ಚಳುವಳಿಯಾಗಬೇಕು ಎಂದು ತಿಳಿಸಿದರು.

ಕಾನ್ವೆಂಟ್ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಾರೆ. ಹೊರಗಡೆ ಕಳುಹಿಸುತ್ತಾರೆ ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡದೇ ಮತ್ತೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ಪ್ರಶ್ನಿಸಿದರಲ್ಲದೇ ಕನ್ನಡ ಶಾಲೆಯ ಹೆಸರಿನಲ್ಲಿ ಪರವಾನಗಿಯನ್ನು ಪಡೆದು ಇಂಗ್ಲೀಷ್ ಶಾಲೆಯನ್ನು ನಡೆಸುತ್ತಿರುವವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಭಾಷೆಯ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ನಾವು ಜಾಣ ಕುರುಡರಂತೆ ವರ್ತಿಸುತ್ತಿದ್ದೇವೆ. ಇದು ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ. ಮನೆಗಳಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ. ಕನ್ನಡ ಭಾಷೆಯಲ್ಲೇ ಜಗತ್ತಿನಲ್ಲಿ ಉತ್ತಮವಾದುದನ್ನು ಸಾಧಿಸಬಹುದು. ಎಂತಹ ವಿಜ್ಞಾನಗಳನ್ನಾದರೂ ಕನ್ನಡದಲ್ಲಿ ಬರೆಯಬಹುದು. ಅರವಳಿಕೆ ಶಾಸ್ತ್ರ ಮತ್ತು ಶಸ್ತ್ರಕ್ರಿಯೆ ಕುರಿತು ಕನ್ನಡದಲ್ಲಿಯೇ ಬರೆಯಬಹುದು ಎನ್ನುವುದನ್ನು ಕೆಲ ಲೇಖಕರು ಬರೆದು ತೋರಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ರಮೇಶ್ ಬಾಬು, ಆಲನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಶಾರದಮ್ಮ, ಸಮ್ಮೇಳನಾಧ್ಯಕ್ಷ ಬಸವರಾಜು ಕುಕ್ಕರಹಳ್ಳಿ, ಗುರುಶಾಂತ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾದ್ಯಕ್ಷರನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು.

Leave a Reply

comments

Related Articles

error: