ಮೈಸೂರು

ಅಧ್ಯಯನದ ಜೊತೆಗೆ ಸ್ಪಷ್ಟಗುರಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ : ಎ. ದೇವರಾಜು

ಮೈಸೂರು,24;- ಆಸಕ್ತಿಯ ಅಧ್ಯಯನದ ಜೊತೆಗೆ ಸ್ಪಷ್ಟಗುರಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ ಎಂದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ 5 ಬ್ಯಾಂಕುಗಳಿಗೆ ನೇಮಕಾತಿ ಆದೇಶ ಪಡೆದು ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕೆ.ಎ.ಎಸ್ ಪರೀಕ್ಷೆಯನ್ನು ಪಾಸ್ ಮಾಡಿ ಪ್ರಸ್ತುತ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಎ. ದೇವರಾಜು ತಿಳಿಸಿದರು.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ವತಿಯಿಂದ ಗುರುವಾರ ಐಬಿಪಿಎಸ್ ಪರೀಕ್ಷೆ ತೆಗೆದುಕೊಂಡಿರುವ ಮಕ್ಕಳಿಗೆ ಹೊರತಂದಿರುವ ಪರೀಕ್ಷಾ ಅಧ್ಯಯನ ಸಾಮಗ್ರಿಯನ್ನು ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ವಿತರಿಸಿ ಮಾತನಾಡುತ್ತಿದ್ದರು.  ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಮ್ಮೆ ಕಾಲಿಟ್ಟರೆ ಸಾಕಷ್ಟು ಅವಕಾಶಗಳು ಸಿಗುತ್ತಾ ಹೋಗುತ್ತವೆ, ಐಟಿ, ಬಿಟಿ ಸಂಸ್ಥೆಗಳಲ್ಲಿ ನೀಡುವ ಸಂಬಳಕ್ಕಿಂತ ಹೆಚ್ಚಿನ ವೇತನ ಇಲ್ಲಿ ಲಭಿಸಲಿದೆ. ವಾಸಕ್ಕೆ ಮನೆ, ಸಂಚಾರಕ್ಕೆ ಇಂಧನ ವೆಚ್ಚದಂತಹ ಸೌಲಭ್ಯವು ಇದೆ. ಬ್ಯಾಂಕಿಂಗ್ ಕ್ಷೇತ್ರದತ್ತ ಬರುವವರು ಸ್ಪಷ್ಟವಾದ ಗುರಿ, ಜೊತೆಗೆ ವಿಶೇಷ ಆಸಕ್ತಿ ಹೊಂದಿರಲೇ ಬೇಕಾಗುತ್ತದೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ಶೇ 100ರಷ್ಟು ಸುರಕ್ಷಿತ ಉದ್ಯೋಗವಿದು. ಚೆನ್ನಾಗಿ ಕೆಲಸ ಮಾಡಿದರೆ ಉನ್ನತ ಸ್ಥಾನಕ್ಕೂ ಹೋಗಬಹುದು ಎಂದು ಹೇಳಿದರು. ಈಗ ಎಲ್ಲಾ ಹುದ್ದೆಗಳ ಆಯ್ಕೆಗೆ ಪರೀಕ್ಷೆ ಇರುವುದರಿಂದ ನಿರಂತರವಾಗಿ ಅಧ್ಯಯನ ಮಾಡುತ್ತಲೇ ಇರಬೇಕಾಗುತ್ತದೆ. ಹೆಚ್ಚೆಚ್ಚು ಪರೀಕ್ಷೆಗಳನ್ನು ಎದುರಿಸುವುದರಿಂದ ಅನುಭವ ಸಿಗಲಿದೆ, ಜೊತೆಗೆ ಜ್ಞಾನದ ಲಭ್ಯತೆಯೂ ಆಗಲಿದೆ. ಒಂದಲ್ಲ ಒಂದು ಕಡೆ ಅವಕಾಶ ಸಿಕ್ಕೇ ಸಿಗುತ್ತದೆ. ಮುಖ್ಯವಾಗಿ ಅಭ್ಯರ್ಥಿಗಳು ಪ್ರಾಮಾಣಿಕ ಅಧ್ಯಯನ ಹಾಗೂ ಪ್ರಯತ್ನ ಮಾಡಬೇಕಷ್ಟೇ. ಸಾಧ್ಯವಾದಷ್ಟು ಪರೀಕ್ಷೆಗಳನ್ನು ನೀವು ಎದುರಿಸಿ ಎಂದು ಸಲಹೆ ನೀಡಿದರು. ಈ ದೃಷ್ಠಿಯಿಂದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ವತಿಯಿಂದ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದವರು ವಿತರಿಸುತ್ತಿರುವ ಅಧ್ಯಯನ ಪುಸ್ತಕ ಅತ್ಯಂತ ಗುಣಮಟ್ಟದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಎಂ.ಎನ್ ರಮೇಶ್, ಕಾರ್ಯದರ್ಶಿ ಹೆಚ್. ಬಾಲಕೃಷ್ಣ, ಖಜಾಂಚಿ ಕುಮಾರಸ್ವಾಮಿ, ಉಪಾಧ್ಯಕ್ಷ ಮಹೇಶ್ ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: