ಕರ್ನಾಟಕಪ್ರಮುಖ ಸುದ್ದಿ

ಯೋಗೀಶ್‌ಗೌಡ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ : ರಾಮಲಿಂಗಾರೆಡ್ಡಿ

ರಾಜ್ಯ(ಬೆಳಗಾವಿ)ನ.24:- ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿಂದು ಹೇಳಿದರು.

ಯೋಗೀಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು, ವಿನಯ್‌ಕುಲಕರ್ಣಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸದನದಲ್ಲಿ ಬಿಜೆಪಿ ಸದಸ್ಯರು ನಡೆಸಿದ ಧರಣಿ ನಡುವೆಯೇ ಉತ್ತರ ನೀಡಿದ ಅವರು, ಜಿ.ಪಂ. ಸದಸ್ಯ ಯೋಗೀಶ್‌ಗೌಡ ಅವರನ್ನು 2016, ಜೂನ್ 15 ರಂದು ಧಾರವಾಡದಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆ ಸಂಬಂಧ ಐದು ಜನರನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿದೆ. ಧಾರವಾಡದ ನಾಲ್ಕನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದೆ ಎಂದರು. ಈ ಕೊಲೆ ಆಸ್ತಿ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು ದೋಷಾರೋಪಣ ಪತ್ರದಲ್ಲಿ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ 11 ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಉಳಿದ ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಮುಂದಿನ ವಿಚಾರಣೆ ಡಿಸೆಂಬರ್ 2 ರಂದು ನಡೆಯಲಿದೆ ಎಂದರು. ಕೊಲೆಯಾದ ಯೋಗೀಶ್‌ಗೌಡ ವಿರುದ್ಧ ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ 25 ಪ್ರಕರಣಗಳು ದಾಖಲಾಗಿವೆ ಹಾಗೂ ಈತನ ಮೇಲೆ ರೌಡಿ ಶೀಟ್ ಸಹ ತೆರೆಯಲಾಗಿತ್ತು ಎಂದು ಹೇಳಿದರು.

ಸಚಿವರು ಉತ್ತರ ನೀಡುವಾಗ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಚರ್ಚೆಯಾಗದೆ ಉತ್ತರ ನೀಡುವುದು ಸರಿಯಲ್ಲ ಎಂದು ಹೇಳಿದರಾದರೂ ಸಚಿವರು ತಮ್ಮ ಲಿಖಿತ ಉತ್ತರವನ್ನು ಸದನದಲ್ಲಿ ಓದಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: