ಮನರಂಜನೆಮೈಸೂರು

ಭಾವೋದ್ವೇಗದ ಕಂಬನಿ ಬೆರಳ್ ಗೆ ಕೊರಳ್

web-2ಬಣ್ಣಬಣ್ಣದ ಬೆಳಕು, ಹಿತವಾದ ಸಂಗೀತದ ನಡುವೆ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸಹ ಜೀವಂತವಿರುವ ತಳಸಮುದಾಯದ ಬದುಕು, ಗಿರಿಜನರ ಹಾಡುಪಾಡುಗಳ ಕುರಿತು ಸವಿಸ್ತಾರವಾದ ಚಿತ್ರಣ ಕಟ್ಟಿಕೊಡುವ ಜನಪರ ಚಿಂತನೆಯುಳ್ಳ ಕುವೆಂಪು ವಿರಚಿತ ಬೆರಳ್ ಗೆ ಕೊರಳ್ ನಾಟಕ ರಂಗಾಯಣದ ವನರಂಗದಲ್ಲಿ ಅತ್ಯದ್ಭುತವಾಗಿ ಮೂಡಿ ಬಂತು.

ಇಂದಿನ ಶಿಕ್ಷಣ ವಿಶ್ವವಿದ್ಯಾಲಯ ಕೇಂದ್ರಿತ ಎನ್ನುತ್ತೇವೆ. ಆದರೆ ವಿಶ್ವವಿದ್ಯಾಲಯಗಳ ಮಟ್ಟದ ಶಿಕ್ಷಣ ಹಾಗಲ್ಲ. ಅಲ್ಲಿ ಅನೇಕ ಪ್ರತಿಭಾವಂತ ಏಕಲವ್ಯರು ಅನ್ಯ ಮಾರ್ಗವಿಲ್ಲದೇ ಸ್ವಂತಿಕೆಯನ್ನು ಬದಿಗಿಟ್ಟು ಸ್ವಾಭಿಮಾನಕ್ಕೆ ಕಡಿವಾಣ ಹಾಕಿ, ಮಾರ್ಗದರ್ಶಕರು, ಉಪನ್ಯಾಸಕರು ಎನ್ನುವ ಹಲವು ಪ್ರತಿಷ್ಠೆಯ ಬಿಂಕಗುಳಿ ದ್ರೋಣರಿಗೆ ತಮ್ಮ ಪ್ರತಿಭೆ ಮತ್ತು ಕೌಶಲವನ್ನು ಅಡವಿಟ್ಟು ಪದವಿ ಪ್ರಮಾಣಪತ್ರ ಎನ್ನುವ ನಾಮಮಾತ್ರ ಅರ್ಹತೆಯ ಗಳಿಕೆಗಾಗಿ ಸಮಯವನ್ನು ಸವೆಸುತ್ತಿರುವುದು ದುರಂತ. ಯೋಗ್ಯತೆ ಸಾಮರ್ಥ್ಯಗಳಿದ್ದೂ ಗುರುಬೋಧನೆಯ ಶಂಖದಿಂದ ಬಂದ ತೀರ್ಥೋವಿದ್ಯಾರ್ಹತೆಗಳಿಲ್ಲದೇ ಅನೇಕರು ಈಗಲೂ ಯಾವ ಇಲಾಖೆಗೂ ಪ್ರವೇಶಿಸಲಾಗದ ನಿರುದ್ಯೋಗಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಅಂತಹವರೆಲ್ಲರ ಪ್ರತಿನಿಧಿಯಾಗಿ ಭಾರತ ಕತೆಯ ಏಕಲವ್ಯ ಇನ್ನೂ ಜೀವಂತವಾಗಿದ್ದಾನೆ. ಅವನ ತ್ಯಾಗ, ಶೌರ್ಯ,ವಿನಯ ಮತ್ತು ಗುರುಭಕ್ತಿ ಇಲ್ಲಿ ಪ್ರಧಾನವಾಗಿ ಕಂಡಿತು.

ಕಾವ್ಯ ಸೌಂದರ್ಯದ ರಸಾಸ್ವಾದಗಳನ್ನು ಉಣಬಡಿಸುತ್ತಾ ಪ್ರೇಕ್ಷಕರ ಹೃದಯಾಂತರಾಳದಿಂದ ಬರುವ ಭಾವೋದ್ವೇಗದ ಕಂಬನಿಯೊಂದಿಗೆ ಏಕಲವ್ಯನ ಕಥೆಯನ್ನು ಬೆಸೆದು ಹೊಸೆದುಕೊಂಡಿದ್ದ ದಿನೇಶ್ ಚಮ್ಮಾಳಿಗೆ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕ ಪ್ರೇಕ್ಷಕನ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಪ್ರಸ್ತುತಿ ನಾಟಕ ಸಂಘಟನೆ ವತಿಯಿಂದ ಹಳೆಮನೆ ನೆನಪು ಕಾರ್ಯಕ್ರಮದ ಪ್ರಯುಕ್ತ ಈ ನಾಟಕವನ್ನು ಆಯೋಜಿಸಲಾಗಿತ್ತು.

Leave a Reply

comments

Related Articles

error: