ಪ್ರಮುಖ ಸುದ್ದಿಮೈಸೂರು

ಅಂಬೇಡ್ಕರ್ ಜ್ಞಾನ ಬಳಕೆಯಾಗದಿರುವುದೇ ಅಸಮಾನತೆಗೆ ಕಾರಣ : ಪ್ರೊ.ಕೆ.ಎಸ್.ಭಗವಾನ್

ಮೈಸೂರು.ನ.25 :- ಸಂವಿಧಾನದ ಆಶಯ ಈಡೇರದೆ ಎಲ್ಲೆಲ್ಲೂ ಅಸಮಾನತೆ ತಾಂಡವವಾಡುತ್ತಿದೆ. ಇದಕ್ಕೆ ಅಂಬೇಡ್ಕರ್ ಅವರು ಸಮಾಜಕ್ಕೆ ಧಾರೆಯೆರೆದ ಜ್ಞಾನ ಸಮರ್ಪಕವಾಗಿ ಬಳಕೆಯಾಗದಿರುವುದೇ ಪ್ರಮುಖ ಕಾರಣ ಎಂದು ಪ್ರೊ.ಕೆ.ಎಸ್ ಭಗವಾನ್ ಹೇಳಿದರು.

ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆದ ಶನಿವಾರದಂದು ನಡೆದ “ಅಲಕ್ಷಿತ ಜನಸಮುದಾಯಗಳು” ಎಂಬ ವಿಷಯದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂಬೇಡ್ಕರವರ ಜ್ಞಾನದ ಬದಲು ಅವರ ಜಾತಿಯನ್ನು ಗುರಿಯಾಗಿಸಿ ಚರ್ಚೆ ನಡೆಯುತ್ತಿದೆ. ಇದು ಮಾರಕವಾದದ್ದು ಎಂದು ಅಭಿಪ್ರಾಯಪಟ್ಟರು.  ಮೀಸಲಾತಿಯ ಪರ-ವಿರೋಧ ಚರ್ಚೆ ಉಲ್ಲೇಖಿಸಿ ಮಾತನಾಡಿ ಇಂದಿನ ಮೀಸಲಾತಿ ಸಮರ್ಪಕವಾಗಿಲ್ಲ, ಇದು ಬದಲಾಗಬೇಕು. ಸಮುದಾಯಗಳ  ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಜಾರಿಯಾದರೆ ಅಲಕ್ಷಿತ ಜನಸಮುದಾಯವನ್ನು ಸಾಮಾಜಿಕವಾಗಿ ಮೇಲೆತ್ತಬಹುದು ಎಂದರು. ‘ವಿಶೇಷ ಚೇತನರು’ ಎಂಬ ವಿಷಯ ಕುರಿತು ಮಾತನಾಡಿದ ಜಿ.ಕೆ.ಮಹಾಂತೇಶ್ ಅವರು ವಿಶೇಷ ಚೇತನರಿಗೆ ಅನುಮಾನ,ಅನುಕಂಪನತ್ತು ಕೀಳರಿಮೆ ಬಿಟ್ಟು ಅವಕಾಶಗಳನ್ನು ಸೃಷಿ ಮಾಡುವುದು ಇಂದಿನ ಅನಿವಾರ್ಯ.ವಿಕಲ ಚೇತನ ಸ್ನೇಹಮಯಿ ಸಮಾಜ ನಿರ್ಮಾಣ ಆಗಬೇಕು. ಇದರ ಹೊಣೆಯನ್ನು ಎಲ್ಲರೂ ಹೊರಬೇಕು ಎಂದರು. ಗೋಷ್ಠಿಯಲ್ಲಿ ಡಾ.ಮೀನಾಕ್ಷಿ ಬಾಳಿ ‘ಲೈಂಗಿಕ ದಮನಿತರು’ ವಿಷಯದ ಕುರಿತು ಮಾತನಾಡಿ, ಲೈಂಗಿಕತೆ ಜಗತ್ತಿನ ಪ್ರಾಚೀನ ವೃತ್ತಿಗಳಲ್ಲಿ ಒಂದಾಗಿದೆ.  ಕರ್ನಾಟಕದಲ್ಲಿ ಈ ವೃತ್ತಿಯಲ್ಲಿರುವವರು ಉತ್ತರ ಕರ್ನಾಟಕದವರೇ  ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೇವದಾಸಿ ಪದ್ದತಿ ಈ ದಂದೆಗೆ ರಹದಾರಿ ನೀಡಿದಂತಾಗಿದೆ. ಒಮ್ಮೆ ಈ ವೃತ್ತಿಗಿಳಿದರೆ ಅವರಿಗೆ ಪರ್ಯಾಯ ಬದುಕೇ ಇಲ್ಲ ಎಂದರು.   ಡಾ.ಬಾಲಗುರುಮೂರ್ತಿ ‘ಅಲೆಮಾರಿಗಳು’ ಎಂಬ ವಿಷಯ ಮಂಡಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಇಂದಿಗೂ ಜಾತಿ ಪತ್ರಕ್ಕಾಗಿ ಹಲವು ಅಲೆಮಾರಿ ಸಮುದಾಯ ಅಲೆಯುತ್ತಿದೆ. ಅಲೆಮಾರಿಗಳಿಗೆ ಧ್ವನಿ ಇಲ್ಲದಂತಾಗಿದೆ. ರಾಜ್ಯದ ಒಟ್ಟು ಅಲೆಮಾರಿಗಳ ಪೈಕಿ ಶೇ 89ರಷ್ಟು ಜನರಿಗೆ ಸ್ಮಶಾನವೇ ಇಲ್ಲ ಎಂದರು. ‘ಬುಡಕಟ್ಟು ಸಮುದಾಯ’ ವಿಷಯ ಕುರಿತು ಮಾತನಾಡಿದ ಡಾ.ಎಂ.ಕೆ.ಗುರುಲಿಂಗಯ್ಯ ಅನಕ್ಷರತೆ  ಈ ಸಮುದಾಯವನ್ನು ತೀವ್ರವಾಗಿ ಕಾಡುತ್ತಿದೆ. ಸರ್ಕಾರ ಒಪ್ಪಿಕೊಂಡಿರುವ ನೂತನ ಸಂಸ್ಕೃತಿ ನೀತಿಯಲ್ಲಿ ಕರ್ನಾಟಕದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ರಚನೆ ಅಭಿನಂದನಾರ್ಹವಾಗಿದೆ ಎಂದರು.

ಹರಿಹರ ಆನಂದಸ್ವಾಮಿ ಮತ್ತು ಸಿದ್ದಸ್ವಾಮಿ ಅವರು ಗೋಷ್ಠಿಯ ವಿಷಯಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: