ಪ್ರಮುಖ ಸುದ್ದಿಮೈಸೂರು

ಮಕ್ಕಳಲ್ಲಿರುವ ಭಾವನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ : ಬೋಳುವಾರು ಮಹಮದ್ ಕುಂಞಿ ವಿಷಾದ

ಮೈಸೂರು, ನ.25- ಶಿಕ್ಷಕರು ಹಾಗೂ ಪೋಷಕರು ದೇಶದ ಸಂರಕ್ಷಣೆಗೆ ಮಕ್ಕಳನ್ನು ರೂಪಿಸುವತ್ತ ಮುಂದಾಗಬೇಕೆಂದು ಬೋಳುವಾರು ಮಹಮದ್ ಕುಂಞಿ ಹೇಳಿದರು.

ಕಲಾಮಂದಿರದ ಮುಳ್ಳೂರು ನಾಗರಾಜ ವೇದಿಕೆಯಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಗೋಷ್ಠಿ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಕ್ಕಳು ಮಕ್ಕಳಲ್ಲಿ ಸಾಹಿತ್ಯ – ಆಧುನಿಕತೆ ಸವಾಲುಗಳ ವಿಷಯ ಮಂಡಿಸಿ ಮಾತನಾಡುತ್ತಿದ್ದರು. ಇಂದು ಮಕ್ಕಳ ಸಾಹಿತ್ಯವು ಪ್ರಚಲಿತ ವಿದ್ಯಮಾನದಲ್ಲಿ ಪೋಷಿಸುತ್ತಿರುವುದು ಸಂತಸದ ಸಂಗತಿ ಎಂದರಲ್ಲದೇ  ಮಕ್ಕಳಲ್ಲಿರುವ ಭಾವನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ವಿಷಾದವ್ಯಕ್ತಪಡಿಸಿದರು. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಭಾವನೆಗಳು ಸಾಹಿತ್ಯ ರೂಪದಲ್ಲಿ ಹೊರ ಹೊಮ್ಮುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ನೂರಾರು ಸಾಹಿತ್ಯ ದಿಗ್ಗಜರ ಪರಿಕಲ್ಪನೆಯ ಸಾರಾಂಶವನ್ನು ತಮ್ಮದೇ ಆದ ಬರವಣಿಗೆ ಮೂಲಕ ಬಿಂಬಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಪುರಾಣ, ಪಂಚತಂತ್ರ ಕಥೆಗಳು, ದೇವರ ಕಥೆಗಳು, ಅಕ್ಬರ್ ಆಲಿ ಕಥೆಗಳು ಸೇರಿದಂತೆ ಅನೇಕ ಐತಿಹಾಸಿಕ ಕಥೆಗಳನ್ನು ಹೇಳಿಕೊಡುತ್ತಾ ಬೆಳೆಸುತ್ತೇವಾದರೂ ಅದಾವುದೂ ಮಕ್ಕಳ ಸಾಹಿತ್ಯವಲ್ಲ. ಮಕ್ಕಳ ಮನಸ್ಸಲ್ಲಿರುವ ಪದ ಪುಂಜಗಳು ಅಕ್ಷರಗಳಾಗಿ ಹೊರ ಹೊಮ್ಮಿ, ಸಾಹಿತ್ಯಗಳಾಗಿ ರೂಪುಗೊಳ್ಳುತ್ತವೆ. ಆದರೇ ದೇವರುಗಳ ಹೆಸರನ್ನು ಹೇಳಿ ಮಕ್ಕಳನ್ನು ಹಾಳು ಮಾಡುವ ಬದಲು ಸಮಾಜವನ್ನು ತಿದ್ದುವ ಸಾಮರಸ್ಯ ಬೆಳೆಸುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕೆಂದರು.

ಶಿವರಾಂ ಕಾರಂತರು ಹೇಳಿದ ಹಾಗೆ ನಮ್ಮ ನಾಡು, ನುಡಿ ಬಿಂಬಿಸುವ ಜೈ ಕರ್ನಾಟಕ ಮಾತೆ ನಮ್ಮ ಭವ್ಯ ಭಾರತದ ಪರಂಪರೆ, ಸಮಾನತೆ, ಭದ್ರತೆಯನ್ನು ಬಿಂಬಿಸುವ ವಂದೇ ಮಾತರಂ ಎಂಬ ದೇಶದ ನುಡಿಗಳನ್ನು ಮಕ್ಕಳ ಮನಸಲ್ಲಿ ತುಂಬಬೇಕು. ಅವರಿಗೆ ಯಾವ ವಿಧವಾದ ಕಂಠಪಾಠವನ್ನು ಮಾಡದಂತೆ ತಿಳಿ ಹೇಳಬೇಕು. ನಮಗಿಂತ ಸಮಾಜ ದೊಡ್ಡದು. ಸಮಾಜಕ್ಕಿಂತ ನಾಡು ದೊಡ್ಡದು, ನಾಡಿಗಿಂತ ದೇಶ ದೊಡ್ಡದು ಎಂಬ ಪರಿಕಲ್ಪನೆಯನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರಿಸಿ ದೇಶದ ಸಂರಕ್ಷಣೆಗೆ ಇಂದಿನಿಂದಲೇ ತಯಾರು ಮಾಡುವ ದಿಸೆಯಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: