ಪ್ರಮುಖ ಸುದ್ದಿಮೈಸೂರು

ಕೃಷಿ ಕಾರ್ಮಿಕರು ಉದ್ಯೋಗ ಅರಸಿ ಪಟ್ಟಣ ಸೇರುತ್ತಿರುವುದರಿಂದ ಇಂದು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ : ಬೇಸರ ವ್ಯಕ್ತಪಡಿಸಿದ ಡಾ.ವಸಂತಕುಮಾರ್ ತಿಮಕಾಪುರ

ಮೈಸೂರು,ನ.25:- ಕೃಷಿ ಲಾಭದಾಯಕವಾಗಿ ಉಳಿದಿಲ್ಲ. ಯುವಕರು ಹಳ್ಳಿಗಳಲ್ಲಿರದೇ ಉದ್ಯೋಗ ಅರಸಿ ಪಟ್ಟಣ ಸೇರುತ್ತಿರುವುದರಿಂದ ಇಂದು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಡಾ.ವಸಂತಕುಮಾರ್ ತಿಮಕಾಪುರ ಬೇಸರ ವ್ಯಕ್ತಪಡಿಸಿದರು.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಎರಡನೇ ದಿನ ನಡೆದ ಕರ್ನಾಟಕ ಕೃಷಿ ಸಂಕ್ರಮಣ ಸ್ಥಿತಿಯ ಗೋಷ್ಠಿಯಲ್ಲಿ ಬರನಿರ್ವಹಣೆಯ ಪಾಠಗಳು ವಿಷಯ ಕುರಿತು ಮಾತನಾಡಿದ ಅವರು ನಮಗೆ ಗೊತ್ತಿರುವ ಹಾಗೆ ನೀರಿನ ಕೊರತೆ ಹೆಚ್ಚುತ್ತಿದೆ. ಬೆಳೆಗೆ ಎಷ್ಟು ಮಳೆಬೇಕೋ ಅಷ್ಟು ಬರುತ್ತಿಲ್ಲ. ಇದರಿಂದ ರೈತರಿಗೆ ಬೆಳೆಬೆಳೆಯಲು ಕಷ್ಟವಾಗಲಿದೆ. ಆಹಾರದ ಕೊರತೆಯಾಗಲಿದೆ. ಕುಡಿಯುವ ನೀರಿನ ಕೊರೆಯಾಗಲಿದೆ. ಇದರಿಂದ ಹಸಿವು ಹೆಚ್ಚಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುತ್ತದೆ. ಇದರ ಪರಿಣಾಮ ಹಳ್ಳಿಯಲ್ಲಿ ಕೃಷಿಯಲ್ಲಿನ ಕೃಷಿ ಕಾರ್ಮಿಕರು ಪಟ್ಟಣದ ಕಡೆ ಗುಳೆಹೋಗುತ್ತಾರೆ. ಆ ಕಾರಣದಿಂದಲೇ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹಳ್ಳಿಗಳಲ್ಲಿ ಯಾವ ಯುವಕರೂ ಇರಲು ಇಷ್ಟಪಡುತ್ತಿಲ್ಲ. ಕೃಷಿ ಲಾಭದಾಯಕವಾಗಿ ಉಳಿದಿಲ್ಲ ಎಂದರು. ಪರಿಸರದಲ್ಲಿ ಬದಲಾವಣೆಯಾಗಿದೆ. ಚಳಿಗಾಲದಲ್ಲಿ ಸೆಕೆಯಾಗುತ್ತಿದೆ. ಬೇಸಿಗೆಯಲ್ಲಿ ತಿರುಗಬೇಕಾದ ಫ್ಯಾನ್ ಚಳಿಗಾಲದಲ್ಲಿ ತಿರುಗುತ್ತಿದೆ. ಕೊಡಗಿನಲ್ಲಿ ಮೊದಲು ಫ್ಯಾನ್, ಫ್ರಿಜ್ ಇರಲಿಲ್ಲ. ಈಗ ಅವೆಲ್ಲ ಬಂದಿವೆ. ಆ ಮಟ್ಟಕ್ಕೆ ಪರಿಸರ ಬದಲಾವಣೆಯಾಗಿದೆ. ಕೃಷಿ ಭೂಮಿಯನ್ನು ಆವರಿಸಿ ರಸ್ತೆಗಳು, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಆವರಿಸುತ್ತಿವೆ. ಕೃಷಿ ಭೂಮಿ ಕಡಿಮೆ ಆಗ್ತಾ ಇದೆ. ಜನಸಂಖ್ಯೆಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿ ಭಾರತ ನಂಬರ್ ವನ್ ಆಗಲಿದೆ ಎಂದು ಖೇದ ವ್ಯಕ್ತಪಡಿಸಿದರು. ನಾವೇ ಆಹಾರ ಉತ್ಪಾದಿಸುವಂತಾಗಬೇಕು. ಕಡಿಮೆ ಮಾನವ ಸಂಪನ್ಮೂಲ ಬಳಸಿ, ಕಡಿಮೆ ವಿಸ್ತೀರ್ಣದಲ್ಲಿ, ಕಡಿಮೆ ನೀರಿನಿಂದ, ಪೋಷಕಾಂಶವುಳ್ಳ ಆಹಾರವನ್ನು ತಯಾರಿಸಿಕೊಳ್ಳುವಂತಾಗಬೇಕೆಂದು ತಿಳಿಸಿದರು. ಮಾಜಿ ಕುಲಪತಿ ಪ್ರೊ.ಬಿಸಿಲಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕುಲಪತಿ ಡಾ.ನಾರಾಯಣ ಗೌಡ ಪರ್ಯಾಯ ಕೃಷಿ ಮಾದರಿಗಳು ಮತ್ತು ಸಾಧ್ಯತೆಗಳು, ಡಾ.ಸಿದ್ದನಗೌಡ ಪಾಟೀಲ ಕೃಷಿ ಮಾರುಕಟ್ಟೆಯ ಸವಾಲುಗಳು ಕುರಿತು ವಿಷಯ ಮಂಡಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: