ಪ್ರಮುಖ ಸುದ್ದಿಮೈಸೂರು

ಸರ್ಕಾರ ಪ್ರತಿಜಿಲ್ಲೆಯಲ್ಲಿಯೂ ರಂಗಮಂದಿರ ಮತ್ತು ಶಾಲೆಗಳಲ್ಲಿ ರಂಗಶಿಕ್ಷಕರನ್ನು ನೇಮಿಸಬೇಕಿದೆ : ನಾ.ದಾಮೋದರ ಶೆಟ್ಟಿ

ಮೈಸೂರು, ನ.25 :- 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಚಾರ ಗೋಷ್ಠಿಗಳು ಸಾಹಿತ್ಯಾಸಕ್ತರಿಗೆ ರಸದೌತಣ ನೀಡುತ್ತಿದೆ. ಎರಡನೇ ದಿನ ಕರ್ನಾಟಕ ಕಲಾಮಂದಿರದಲ್ಲಿ ‘ಕರ್ನಾಟಕ ಕಲಾಜಗತ್ತು’ ಎಂಬ ಗೋಷ್ಠಿ ರಂಗಭೂಮಿ, ಸಂಗೀತ, ನೃತ್ಯ ಮತ್ತು ಯಕ್ಷಗಾನ ವಿಷಯವಸ್ತು ಗಳನ್ನು ಮನದಟ್ಟು ಮಾಡಿತು.

ನಾಡಿನ ಪ್ರಮುಖ ರಂಗ ವಿಮರ್ಶಕ ನ. ದಾಮೋದರ ಶೆಟ್ಟಿ ಅವರು ಕರ್ನಾಟಕ ರಂಗಭೂಮಿಯ ಹೆಜ್ಜೆಗುರುತುಗಳು ಮತ್ತು ಮುಂದಿನ ಕ್ರಮಗಳ ಬಗೆಗೆ ಸಂಕ್ಷಿಪ್ತವಾಗಿ ಮಂಡಿಸಿದರು.  ನಾಡಿನ ಪ್ರಮುಖ ನಾಟಕಕಾರರನ್ನು ನೆನೆದು, ಕೈಲಾಸಂ, ಶ್ರೀರಂಗ, ಕುವೆಂಪು, ಕಂಬಾರ ನಾಟಕ ಸಾಹಿತ್ಯದಲ್ಲಿ ಕೃಷಿಮಾಡಿದರು, ಬಿ.ವಿ.ಕಾರಂತರು ರಂಗಭೂಮಿಗೆ ಶ್ರೀಮಂತಿಕೆಯನ್ನು ವೈಜ್ಞಾನಿಕವಾಗಿ, ಸಂಗೀತಮಯವಾಗಿ ಮತ್ತು ಬೆಳಕಿನ ರಂಗಿನಲ್ಲಿ ಪರಿಚಯಿಸಿಕೊಟ್ಟರು ಎಂದು ವಿವರಿಸಿದರು. ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಂಗ ಶಿಬಿರಗಳನ್ನು ನಡೆಸುವ ಯೋಜನೆ ಒಂದನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇದುವೇ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಅರಿವಿನ ಸಿಂಚನ ಮಾಡುತ್ತಿದೆ. ರಂಗಕ್ರಿಯೆಗಳನ್ನು ಹುರಿದುಂಬಿಸುತ್ತಿದೆ. ಆದರೆ ಇದು ಸಾಲದು ಸರ್ಕಾರ ಪ್ರತಿಜಿಲ್ಲೆಯಲ್ಲಿಯೂ ರಂಗಮಂದಿರ ಮತ್ತು ಶಾಲೆಗಳಲ್ಲಿ ರಂಗಶಿಕ್ಷಕರನ್ನು ನೇಮಿಸಬೇಕಿದೆ ಎಂದು ತಿಳಿಸಿದರು.  ಸಂಗೀತ ವಿಷಯವಾಗಿ ಆರ್.ಎನ್.ಶ್ರೀಲತ ಅವರು ಸವಿಸ್ತಾರವಾಗಿ ಮಾತನಾಡುತ್ತ, ಭರತನ ನಾಟ್ಯಶಾಸ್ತ್ರದ ನಚಿತರ ಕನ್ನಡಿಗರೇ ಪ್ರಮುಖ ಲಕ್ಷಣಕಾರರು ಇವರ ಕೊಡುಗೆ ಅಪಾರ ಮತ್ತು ಅಧ್ಯಯನ ವಸ್ತು ಎಂದು ತಿಳಿಸಿದರು. ವಚನ ಸಂಗೀತ, ದಾಸ ಸಂಗೀತದ ಆಳ-ಅಗಲಗಳನ್ನು ಪರಿಚಯಿಸುತ್ತ ಶ್ರೀಲತ ಅವರೂ ಕೂಡ ಶಾಲೆಗಳಲ್ಲಿ ಸಂಗೀತ ಶಿಕ್ಷಣದ ಬಗ್ಗೆ ಸರ್ಕಾರ ಹೆಚ್ಚನ ಗಮನ ಹರಿಸಬೇಕು ಎಂದು ವಿವರಿಸಿದರು.  ನೃತ್ಯ ಎಂಬ ವಿಷಯದ ಕುರಿತು ರಮ್ಯ ನಾಗರಾಜ್ ಅವರು ನಾಟ್ಯದ ಇತಿಹಾಸ ಮತ್ತು ಕರ್ನಾಟಕದ ಸಾಹಿತ್ಯದಲ್ಲಿ, ಶಿಲ್ಪಕಲೆಯಲ್ಲಿ ಪ್ರಸ್ತಾಪಿಸಿರುವ ನೃತ್ಯದ ಪ್ರಮುಖ ಲಕ್ಷಣಗಳನ್ನು ವಿವರಿಸಿದರು. ಭಾರತದಲ್ಲಿನ ಎಂಟು ಬಗೆಯ ಶಾಸ್ತ್ರೀಯ ನೃತ್ಯಗಳ ಉಲ್ಲೇಖ ಮಾಡುತ್ತ ಚಾಲುಕ್ಯ ಶಿಲ್ಪಕಲೆಯಲ್ಲಿನ ನಾಟ್ಯದ ಕುರಿತು ಪ್ರಾತ್ಯಕ್ಷಿಕೆಯನ್ನು  ತೋರಿಸಿದರು.

ಯಕ್ಷಗಾನ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ ಅವರು ಕರಾವಳಿಯ ಗಂಡುಕಲೆ ಭೂತ, ವರ್ತಮಾನ ಮತ್ತು ನವ ಪ್ರಯೋಗಗಳು ಅದರ ವೈವಿಧ್ಯತೆಗಳನ್ನು ವಿವರಿಸಿದರು. ಗೋಷ್ಠಿಯ ಅಧ್ಯಕ್ಷ ಎಂ.ಎಸ್. ಮೂರ್ತಿ ಅವರು ಮಾತನಾಡಿ ಕಲೆ ನಾಡಿನ ಜೀವಂತಿಕೆಯ ಪ್ರತೀಕ ಅದರ ಭವ್ಯ ಪರಂಪರೆಯನ್ನು ಮನನ ಮಾಡಿಕೊಂಡು ಅದರ ಮೂಲ ಬೇರುಗಳನ್ನು ಗಟ್ಟಿಗೊಳಿಸುವ ಬಗೆಗೆ ಹೆಜ್ಜೆ ಇಡಬೇಕಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: