ಕರ್ನಾಟಕ

ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ

ಮಡಿಕೇರಿ,ನ.25-ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘ ಜಿಲ್ಲೆಯ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಜಿಲ್ಲೆಯ ಹವಮಾನ ವೈಪರಿತ್ಯ ಮತ್ತು ಬೆಳೆಗಳ ಬೆಲೆ ಕುಸಿತದಿಂದಾಗಿ ಕೊಡಗು ಗೃಹ ನಿರ್ಮಾಣ ಸಹಕಾರ ಸಂಘದಿಂದ ಪಡೆದುಕೊಂಡಿರುವ ಸಾಲವನ್ನು ಹಿಂತಿರುಗಿಸಲು ರೈತರಿಗೆ ಸಾಧ್ಯವಾಗಲಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವ ಬೆನ್ನಲ್ಲೇ ರೈತರಿಗೆ ನೋಟೀಸ್ ಜಾರಿಗೊಳಿಸುವ ಮೂಲಕ ಸಂಘ ಜಿಲ್ಲೆಯ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಮನು ಸೋಮಯ್ಯ, ಕೊಡಗು ಗೃಹ ನಿರ್ಮಾಣ ಸಹಕಾರ ಸಂಘದಿಂದ ಸುಮಾರು 158 ಮಂದಿ ರೈತರು ತಮ್ಮ ಜಮೀನನ್ನು ಅಡವಿಟ್ಟು ಸಾಲ ಪಡೆದುಕೊಂಡಿದ್ದಾರೆ. ಹವಮಾನ ವೈಪರಿತ್ಯ ಮತ್ತು ಬೆಳೆಗಳ ಬೆಲೆ ಕುಸಿತದಿಂದಾಗಿ ರೈತರು ಸಾಲ ಹಿಂತಿರುಗಿಸಿರಲಿಲ್ಲ. ಇದರ ಬೆನ್ನಲ್ಲೇ 2006-07ನೇ ಸಾಲಿನಲ್ಲಿ ಕೃಷಿ ಸಾಲದ ಬಡ್ಡಿ ಮನ್ನಾ ಮಾಡುವಂತೆ ಮತ್ತು ಅಸಲನ್ನು ಹೊಸ ಸಾಲವಾಗಿ ಪರಿವರ್ತಿಸುವಂತೆ ಯೋಜನೆಯೊಂದನ್ನು ಜಾರಿಗೊಳಿಸಲಾಗಿತ್ತು. ಆದರೆ ಸಂಘ ಇದಕ್ಕೆ ಸಮ್ಮತಿ ಸೂಚಿಸದ ಹಿನ್ನೆಲೆ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದರು.

ಪ್ರಕರಣ ನ್ಯಾಯಾಲಯದಲ್ಲಿರುವ ಸಂದರ್ಭದಲ್ಲೇ ಕಾಫಿ ಪ್ಯಾಕೇಜ್‍ನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಇದರಿಂದಲೂ ರೈತರಿಗೆ ಪ್ರಯೋಜನವಾಗಿರಲಿಲ್ಲ. ಆದರೆ ಸಂಘ ಸದಸ್ಯರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಸಂದರ್ಭದಲ್ಲಿ ನ್ಯಾಯಾಲಯ ವಸೂಲಾತಿಗೆ ತಡೆಯಾಜ್ಞೆ ನೀಡಿತ್ತು. ಇದಾದ ಬಳಿಕ 2 ವರ್ಷ ಸುಮ್ಮನಿದ್ದ ಸಂಘದ ಆಡಳಿತ ಮಂಡಳಿ ಇದೀಗ ಮತ್ತೆ ರೈತರಿಗೆ ಕಿರುಕುಳ ನೀಡಲಾರಂಭಿಸಿದೆ ಎಂದು ಆರೋಪಿಸಿದರು.

ಕಾನೂನು ಬಾಹಿರವಾಗಿ ರೈತರಿಗೆ ನೋಟೀಸ್ ನೀಡಿರುವುದಕ್ಕೆ ಸ್ಪಷ್ಟನೆ ನೀಡಬೇಕು. ತಪ್ಪಿದಲ್ಲಿ ಸಂಘಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಖಜಾಂಚಿ ಸತ್ಯ, ರೈತ ಮುಖಂಡರಾದ ಆದೆಂಗಂಡ ಅಶೋಕ್, ಸುನಿಲ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: