ಮೈಸೂರು

ಏಕೀಕರಣ ಕಹಿ-ಸಿಹಿಗಳ ಸಮ್ಮಿಲನ : ಡಾ.ಪೂರ್ಣಾನಂದ

nataraj-2ಭಾರತೀಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಸಮಾರಂಭ 1956-2016 ಕಾರ್ಯಕ್ರಮವನ್ನು ಶನಿವಾರ  ಮೈಸೂರಿನ ಅಗ್ರಹಾರದಲ್ಲಿರುವ ನಟರಾಜ ಕಾಲೇಜಿನ ಕೀರ್ತಿಶೇಷ ಕೆ.ಸಿ.ರೆಡ್ಡಿ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಹೆಚ್.ಎಂ.ವಸಂತಮ್ಮ, ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಎಸ್.ವೆಂಕಟೇಶ್ ಉಪಸ್ಥಿತರಿದ್ದರು. ಹಿರಿಯ ಸಾಮಾಜಿಕ ಚಿಂತಕ ಕೆ.ರಘುರಾಮಯ್ಯ ವಾಜಪೇಯಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಆರ್.ಜೋಯಿಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎನ್. ಪದ್ಮನಾಭ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಪಶು ವೈದ್ಯಾಧಿಕಾರಿ ಡಾ.ಮ.ಪು.ಪೂರ್ಣಾನಂದ ಕರ್ನಾಟಕ ಏಕೀಕರಣ ಕುರಿತು ಮಾತನಾಡಿದರು. ಕರ್ನಾಟಕ ಏಕೀಕರಣ ಕಹಿ ಮತ್ತು ಸಿಹಿ ಘಟನೆಗಳ ಸಮ್ಮಿಲನವಾಗಿದೆ. ಏಕೀಕರಣವಾಗಿ 60 ವರ್ಷಗಳು ಸಂದಿವೆ. ಮೊದಲು ಕರ್ನಾಟಕ ಏಕೀಕರಣದ ಅಸ್ತಿಭಾರವಾಗಿದ್ದು ಉತ್ತರ ಕರ್ನಾಟಕ ಭಾಗದಲ್ಲಿ. ಹಳೇ ಮೈಸೂರು ಭಾಗದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು. ಕೃಷಿ, ಶಿಕ್ಷಣ, ಸಾಮಾಜಿಕ ಪರಿಸ್ಥಿತಿ ಪ್ರಗತಿಯ ಹಾದಿಯಲ್ಲಿದ್ದವು. ಆದ್ದರಿಂದ ಏಕೀಕರಣದ ಅಗತ್ಯತೆ ಕಾಣಲಿಲ್ಲ. ಆದರೆ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ್ ಪ್ರೆಸಿಡೆನ್ಸಿ, ಕಾಸರಗೋಡು ಭಾಗಗಳಲ್ಲಿ ಏಕೀಕರಣದ ಕೂಗು ಹೆಚ್ಚಾಗಿತ್ತು ಎಂದರು.

“ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣದ ಪ್ರಮುಖ ರೂವಾರಿಗಳು. ಇವರ ‘ಉದಯವಾಗಲಿ ಚೆಲುವ ಕನ್ನಡ ನಾಡು’ ಎಂಬ ಗೀತೆ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಲ್ಲದೇ ಡೆಪ್ಯುಟಿ ಚೆನ್ನಬಸಪ್ಪ ಕನ್ನಡ ಶಾಲೆಗಳನ್ನು ತೆರೆಯುವ ಮೂಲಕ ಏಕೀಕರಣಕ್ಕೆ ನಾಂದಿ ಹಾಡಿದರು. 1890 ರಲ್ಲಿ ಆರ್.ವಿ.ದೇಶಪಾಂಡೆ ‘ಕರ್ನಾಟಕ ವಿದ್ಯಾವರ್ಧಕ ಸಂಘ’ವನ್ನು ಸ್ಥಾಪಿಸಿದರು. ಕಡಪ ರಾಘವೇಂದ್ರರಾಯರು, ರಾವ್ ಬಹುದ್ದೂರ್ ಸಿದ್ದಪ್ಪ ಕಂಬಳಿ. ಎಸ್.ನಿಜಲಿಂಗಪ್ಪ, ಗುದ್ಲಪ್ಪ ಹುಲ್ಲಿಕೇರಿ ಇನ್ನೂ ಮೊದಲಾದವರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಇಂತಹ ರೂವಾರಿಗಳ ಪರಿಶ್ರಮದಿಂದ ಕರ್ನಾಟಕ ಏಕೀಕರಣವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ವಸಂತ ಕವಿತ ಶ್ರೀಕರ್, ಕೆ.ಸಿ.ರೆಡ್ಡಿ, ಡಾ.ಬಿ.ಕೃಷ್ಣಮೂರ್ತಿ, ಡಾ.ಎಸ್,ಶಿವರಾಜಪ್ಪ, ಡಾ.ಹೆಚ್.ಪಿ.ಜ್ಯೋತಿ, ಮಂಜುಳ ಉಮೇಶ್, ಭಾಗ್ಯಶ್ರೀ ಚಂದ್ರಶೇಖರ್ -ಒಟ್ಟು 6 ಮಂದಿಗೆ ಸಾರ್ಥಕ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಇದಕ್ಕೂ ಮುನ್ನ ರವೀಂದ್ರಕುಮಾರ್ ಅವರ ಸಾರಥ್ಯದಲ್ಲಿ ಶಾಲಾ ವಿದ್ಯಾರ್ಥಗಳಿಗಾಗಿ  ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Leave a Reply

comments

Related Articles

error: