ಮೈಸೂರು

ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಕೆ. ವೆಂಕಟೇಶ್ ಗುದ್ದಲಿ ಪೂಜೆ

ಬೈಲಕುಪ್ಪೆ: ತಾಲೂಕಿನಲ್ಲಿ ಭೀಕರ ಬರಗಾಲ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡಬೇಕು. ಆಗ ರೈತರ ಜನರಿಗೆ ನಮ್ಮಿಂದ ಸ್ವಲ್ಪವಾದರೂ ಅನುಕೂಲವಾಗುತ್ತದೆ ಎಂದು ನೂತನ ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಕೆ. ವೆಂಕಟೇಶ್ ತಿಳಿಸಿದರು.

ಅವರು ತಾಲೂಕಿನ ಹಸುವಿನ ಕಾವಲು ಗ್ರಾಮದಲ್ಲಿ ಸುಮಾರು 64.25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಗ್ರಾಮಸ್ಥರಿಂದ ಬಿಡಿಎ ಅಧ್ಯಕ್ಷರಾಗಿದ್ದಕ್ಕೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪಿರಿಯಾಪಟ್ಟಣ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳೆಲ್ಲ ಎಚ್ಚೆತ್ತುಕೊಂಡು ಕೆಲಸಮಾಡಬೇಕು. ಈಗಾಗಲೇ ಗ್ರಾ.ಪಂ.ಗಳಿಗೆ 14ನೇ ಹಣಕಾಸು ಯೋಜನೆಯಡಿ ಹಣ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕುಡಿಯುವ ನೀರಿಗೆ ಕಾಯ್ದಿರಿಸಿಸಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಹೂಳೆತ್ತುವುದು, ರಸ್ತೆ, ಚರಂಡಿ, ಕೆರೆ ಏರಿ ಕಟ್ಟುವುದು ಇನ್ನು ಮುಂತಾದ ಕೆಲಸಗಳನ್ನು ಮಾಡಿಸಬೇಕು. ಅಧಿಕಾರಿಗಳು ಸಣ್ಣ-ಪುಟ್ಟ ಕೆಲಸ ಕಾರ್ಯಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾಡಿಸಬೇಕು ಎಂದರು.

ಈ ಸಂದರ್ಭ ತಾ.ಪಂ.ಅಧ್ಯಕ್ಷ ಕೆ.ಎಸ್. ನಿರೂಪರಾಜೇಶ್, ತಾ.ಪಂ. ಸದಸ್ಯ ಕುಂಜಣ್ಣ ಕರ್ನಾಡ್, ಚಿಕ್ಕನೇರಣೆ ಗ್ರಾ.ಪಂ.ಅಧ್ಯಕ್ಷ ಜ್ಯೋತಿಕುಮಾರ್, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಹೊಲದಪ್ಪ, ಗ್ರಾ.ಪಂ. ಸದಸ್ಯರಾದ ಶಹಬಾಜ್, ರಾಮಸ್ವಾಮಿ, ಕಾಂತರಾಜು, ತಾ.ಪಂ. ಇಓ ಬಿ.ಎನ್. ವೀಣಾ, ಉಪತಹಸೀಲ್ದಾರ್ ಕುಭೇರ, ಎಇಇ ಪ್ರಕಾಶ್, ಜೆಇ ಗಳಾದ ವಿಜಯಕುಮಾರ್, ಎನ್. ಪ್ರಭು, ನಿರ್ಮಲ, ಸಿಡಿಪಿಓ ಮೇಲ್ವಿಚಾರಕಿ ಶ್ವೇತ, ಬಿಇಓ ಕರಿಗೌಡ, ಪಿಡಿಓ ಶ್ರೀದೇವಿ, ಮುಖಂಡರಾದ ಕುಮಾರ್‌ ಕರಡೀಪುರ, ದೇವರಾಜ್‌ ಜೋಗನಹಳ್ಳಿ, ನಟರಾಜ ನಾಯಕ, ಕುಮಾರ ದೇಪುರ, ಸುರೇಶ್, ಪುಟ್ಟರಾಜು, ಶಾಸಕರ ಆಪ್ತ ಕಾರ್ಯದರ್ಶಿ ಬಿ.ವಿ. ಕಿರಣ್‌ಕುಮಾರ್ ಇನ್ನು ಮುಂತಾದವರು ಹಾಜರಿದ್ದರು.

ಫೋಟೊ ವಿವರ: ಪಿರಿಯಾಪಟ್ಟಣ ತಾಲೂಕಿನ ದೇಪುರ ಗ್ರಾಮದಲ್ಲಿ ಶಾಸಕ ಕೆ.ವೆಂಕಟೇಶ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

Leave a Reply

comments

Related Articles

error: