ಮೈಸೂರು

ಬೋಗಾದಿ ರಸ್ತೆಯಲ್ಲಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರದ ನಿರ್ಬಂಧ

ಮೈಸೂರು,ನ.28:- ಮೈಸೂರು ನಗರದ ಬೋಗಾದಿ ರಸ್ತೆಯಲ್ಲಿರುವ ಮಾನಸ ಆಸ್ಪತ್ರೆ ಜಂಕ್ಷನ್‍ನಿಂದ ಮಾನಸ ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನದ ರಸ್ತೆಯ ಅಂಚಿನವರೆಗೆ, ರಸ್ತೆಯ ಒಂದು ಅಂಚಿನಲ್ಲಿ ಭೂಗತ 66 ಕೆವಿ ವಿದ್ಯುತ್ ಕೇಬಲ್ ಅಳವಡಿಸಲು ಕಾಮಗಾರಿಯನ್ನು ನಡೆಸಬೇಕಾಗಿದೆ. ಕಾಮಗಾರಿಯು ರಸ್ತೆಯ ಉತ್ತರ ಭಾಗದ ಅಂಚಿನಲ್ಲಿ ನಡೆಯಲಿದ್ದು,  ಭೂಗತ 66 ಕೆವಿ ವಿದ್ಯುತ್ ಕೇಬಲ್ ಅಳವಡಿಸಲು ಗುಂಡಿ ತೋಡುವ ಸಂಬಂಧ ರಸ್ತೆಯ ಅರ್ಧ ಭಾಗದಷ್ಟು ಮಣ್ಣು ಬೀಳುವ ಕಾರಣ ಈ ಕೆಳಕಂಡಂತೆ ವಾಹನ ಸಂಚಾರ ಮಾರ್ಗ ನಿರ್ಬಂಧ ಮತ್ತು ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ವಾಹನ ಸಂಚಾರದ ನಿರ್ಬಂಧ

ಬೋಗಾದಿ ರಸ್ತೆಯಲ್ಲಿ  ಬೋಗಾದಿ ರಸ್ತೆ-ಚದುರಂಗ ರಸ್ತೆಯ ಜಂಕ್ಷನ್‍ನಿಂದ  ಪೂರ್ವಕ್ಕೆ ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಜಂಕ್ಷನ್‍ವರೆಗೆ ಸಂಚರಿಸುತ್ತಿದ್ದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಈ ಭಾಗದ ರಸ್ತೆಯಲ್ಲಿ ಕುವೆಂಪು ಪ್ರತಿಮೆ ಜಂಕ್ಷನ್ ನಿಂದ-ಪಶ್ಚಿಮಕ್ಕೆ ಚದುರಂಗ ರಸ್ತೆಯ ಜಂಕ್ಷನ್ ವರೆಗೆ ಏಕಮುಖದಲ್ಲಿ ವಾಹನಗಳನ್ನು ಸಂಚರಿಸುವಂತೆ ನಿರ್ಬಂಧ ವಿಧಿಸಲಾಗಿದೆ.

ಬದಲಿ ಮಾರ್ಗ

ಬೋಗಾದಿ ರಸ್ತೆಯಲ್ಲಿ  ಬೋಗಾದಿ ರಸ್ತೆ-ಚದುರಂಗ ರಸ್ತೆಯ ಜಂಕ್ಷನ್‍ನಿಂದ  ಪೂರ್ವಕ್ಕೆ ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಜಂಕ್ಷನ್‍ವರೆಗೆ ಸಂಚರಿಸುತ್ತಿದ್ದ ಎಲ್ಲಾ ಮಾದರಿಯ ವಾಹನಗಳು  ಬೋಗಾದಿ ರಸ್ತೆ-ಚದುರಂಗ ರಸ್ತೆಯ ಜಂಕ್ಷನ್‍ನಲ್ಲಿ ದಕ್ಷಿಣ ಇಲ್ಲವೇ ಉತ್ತರಕ್ಕೆ ತಿರುವು ಪಡೆದು ಚದುರಂಗ ರಸ್ತೆಯ ಮೂಲಕ ಮುಂದೆ ಸಾಗಬೇಕು. ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: