ಮೈಸೂರು

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ನ.28-ರಾಜ್ಯದಲ್ಲಿರುವ ಕಬ್ಬು ಬೆಳೆಗಾರರ ಪದೇ ಪದೇ ಸಂಕಷ್ಟಗಳು ಎದುರಾಗುತ್ತಿವೆ ತಾವು ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಕಬ್ಬಿಗೆ ಕನಿಷ್ಠ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

2017-18ನೇ ಸಾಲಿನ ಕಬ್ಬಿಗೆ ಟನ್ ಗೆ 3500 ರೂ. ದರ ನಿಗದಿಪಡಿಸಬೇಕು. 2016-17ನೇ ಸಾಲಿನ ಎಸ್.ಎ.ಪಿ ದರದ ಬಾಬ್ತು ಟನ್ ಗೆ 90 ರೂ. ಬಣ್ಣಾರಿ ಕಾರ್ಖಾನೆಯಿಂದ ಕೂಡಲೇ ಕೊಡಿಸಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಇದರಿಂದ ರೈತರಿಗೆ ಟನ್ ಗೆ 500 ರೂ. ನಷ್ಟವಾಗುವುದು ತಪ್ಪುತ್ತದೆ. ಸ್ಥಳೀಯ ರೈತರ ಕಬ್ಬು 13-14 ತಿಂಗಳುಗಳಾದರೂ ಕಟಾವಿಗೆ ಅನುಮತಿ ನೀಡದೆ ಹೊರಜಿಲ್ಲೆಯಿಂದ ಕಬ್ಬು ತಂದು ಅರೆಯುವುದನ್ನು ತಪ್ಪಿಸಲು ತಕ್ಷಣವೇ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಈ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿ ಸಭೆ ನಡೆಸಿ ಬಣ್ಣಾರಿ ಕಾರ್ಖಾನೆಗೆ ಸೂಚನೆ ನೀಡಿದ್ದು ಸಕ್ಕರೆ ಸಚಿವರು ಕೂಡ ಆದೇಶ ಹೊರಡಿಸಿರುತ್ತಾರೆ. ಆದರೂ ಇದಾವುದನ್ನು ಲೆಕ್ಕಸದೆ ಬಣ್ಣಾರಿ ಕಾರ್ಖಾನೆ ಆಡಳಿತ ಮಂಡಳಿ ರೈತರನ್ನು ನಿರಂತರವಾಗಿ ಶೋಷಿಸುತ್ತಿದೆ. ಈ ಕಾರ್ಖಾನೆಯ ಡಿಸ್ಟಿಲರಿ ಹಾಗೂ ಕೊ-ಜೆನ್ ರಹದಾರಿಗಳನ್ನು ರದ್ದುಗೊಳಿಸಬೇಕು ಹಾಗೂ ಸಕ್ಕರೆಯನ್ನು ಮುಟ್ಟುಗೋಲು ಹಾಕಿಕೊಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಧರಣಿ ನಿರತ ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದರು. ಪ್ರತಿಭಟನಾಕಾರರನ್ನು ತಡೆಯಲು ಹಾಕಿದ್ದ ಬ್ಯಾರಿಕೆಡ್ ಗಳನ್ನ ಕೂಡ ಲೆಕ್ಕಿಸದೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಕಾರು ನಿಲ್ದಾಣದಲ್ಲಿ ಸರ್ಕಾರದ ವಿರುದ್ಧ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರು ಬೆಳೆದ ಕಬ್ಬಿಗೆ ಬೆಲೆ ನಿಗದಿ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. (ವರದಿ-ಕೆ.ಎಸ್, ಎಂ.ಎನ್)

Leave a Reply

comments

Related Articles

error: