ಮೈಸೂರು

ಪ್ರಧಾನಿ ಮೋದಿ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದ್ದಾರೆ : ಸುಧಾ ಮಾದಯ್ಯ ಅಭಿಮತ

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಭ್ರಷ್ಟಾಚಾರ ಹಾಗೂ ಕಪ್ಪುಹಣ ವಾಪಸ್ ತರಲು 500 ಹಾಗೂ 1000 ರೂ ನೋಟುಗಳನ್ನು ರದ್ದು ಮಾಡಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಧಾ ಮಾದಯ್ಯ ಅಭಿಪ್ರಾಯಪಟ್ಟರು.

ಭಾನುವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ರಾಮಾಂತರ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಹಾಗೂ ಚಾಮುಂಡೇಶ್ವರಿ ಸ್ವಸಹಾಯ ಸಹಕಾರ ಸಂಘದ ಉದ್ಘಾಟನೆಯನ್ನು ಸುಧಾ ಮಾದಯ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಇಂದು ದೇಶದಲ್ಲಿ ಬಡವ ಬಲ್ಲಿದನೆಂಬ ಮಾತು ಇಲ್ಲವೇ ಇಲ್ಲ. ಒಂದೇ ದಿನದಲ್ಲಿ ಧನಿಕ ಬಡವನಾಗ ಬಹುದು.  ಸಾವಿರಾರು ಕೋಟಿ ಕಪ್ಪುಹಣ ಹೊಂದಿರುವ ಶ್ರೀಮಂತರು ನಮ್ಮಂತೆಯೇ ಬಡವರಾದರು. ಮೋದಿ ಅವರ ದೂರದೃಷ್ಟಿಯುಳ್ಳ ಇಂತಹ ನಡೆಯಿಂದ ಭಾರತ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೆ ಮೋದಿ ಅವರು ಜಾರಿಗೆ ತಂದಿರುವ ಸ್ವಚ್ಛಭಾರತ, ಜನಧನ್, ಮೇಕ್ ಇನ್ ಇಂಡಿಯಾ ಸೇರಿದಂತೆ ಹತ್ತು ಹಲವು ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಪಕ್ಷದ ಎಲ್ಲರು ಮೋದಿ ಅವರೊಂದಿಗೆ ಹೆಜ್ಜೆಯಿಟ್ಟರೆ ದೇಶವನ್ನು ಮತ್ತಷ್ಟು ಸ್ವಚ್ಛ ಹಾಗೂ ಸಮೃದ್ಧಗೊಳಿಸಬಹುದು ಎಂದರು.

ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದು ಅವರಿಗೆ ಆರ್ಥಿಕ ಬೆಂಬಲದ ಕೊರತೆಯಿದೆ. ಹಾಗಾಗಿ  ಸ್ವಸಹಾಯ ಸಂಘವನ್ನು ಸ್ಥಾಪಿಸಲಾಗುತ್ತಿದೆ. ಪಕ್ಷದ ಎಲ್ಲಾ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಸಂಘದಿಂದ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಂದಾರಾಜು, ಕಾರ್ಯದರ್ಶಿ ಭಾರತಿ, ತಿ.ನರಸೀಪುರ ಪುರಸಭಾ ಉಪಾಧ್ಯಕ್ಷೆ ರತ್ನಮ್ಮ, ರೇಣುಕಾ, ಗಾಯತ್ರಿ, ಮಂಜುಳಾ ಸೇರಿದಂತೆ ವಿವಿಧ ತಾಲೂಕುಗಳ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

comments

Related Articles

error: