ಮೈಸೂರು

ನ.14-20 : 63 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ

63 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯನ್ನು ನ.14 ರಿಂದ 20 ರವರೆಗೆ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದರು.

ಮೈಸೂರಿನ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ರಾಷ್ಟ್ರೀಯ ಸಹಕಾರ ಯೂನಿಯನ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಅವರ ಮಾರ್ಗದರ್ಶನದಲ್ಲಿ “ಸುಸ‍್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ‍್ಥೆಗಳ ಪಾತ್ರ” ಎಂಬ ಧ್ಯೇಯದೊಂದಿಗೆ ಆಚರಣೆ ಮಾಡಲಾಗುತ್ತದೆ ಎಂದರು.

ನ.14 ರಂದು ಜವಾಹರ್ ಲಾಲ್ ನೆಹರೂ ಅವರ ಜನ್ಮದಿನಾಚರಣೆಯೂ ಆಗಿದ್ದು, ಅಂದು ಬೆಳಿಗ್ಗೆ 9.30 ಕ್ಕೆ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ನಿ., ಸುವರ್ಣ ಸಹಕಾರ ಸೌಧದಲ್ಲಿ  ಧ್ವಜಾರೋಹಣ ನೇರವೇರಿಸಲಾಗುವುದು. ನಂತರ ಮೈಸೂರು –ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಎಸ್.ಚಂದ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ನ.14 ರಂದು ಶಿಕ್ಷಣ ಮತ್ತು ತರಬೇತಿಯ ಮೂಲಕ ಸಹಕಾರ ಸಂ‍ಘಗಳನ್ನು ಬಲಪಡಿಸುವುದು, ನ.15 ರಂದು ಸಹಕಾರ ಸಂಘಗಳ ಮೂಲಕ ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು ಅಭಿವೃದ್ಧಿ ಪಡಿಸುವುದು, ನ.16 ರಂದು ಸಹಕಾರ ಸಂಘಗಳ ಮೂಲಕ ಆರ್ಥಿಕ ಸೇರ್ಪಡೆ, ನ.17 ರಂದು ಸಹಕಾರ ಸಂಸ‍್ಥೆಗಳ ಮೂಲಕ ಸರ್ಕಾರದ ವಿಶಿಷ್ಟ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು, ನ.18 ರಂದು ಸಹಕಾರ ಸಂಘಗಳ ಮೂಲಕ ಯುವಕರು, ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ಬಲಪಡಿಸುವುದು, ನ.19 ರಂದು ಸಹಕಾರ ಸಂಘಗಳು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ನ.20 ರಂದು ಸಹಕಾರ ಸಂಘಗಳ ಮೂಲಕ ಆಡಳಿತ, ಮೌಲ್ಯಗಳು ಮತ್ತು ನಾಯಕತ್ವವನ್ನು ಬೆಳೆಸುವುದು ಇವೇ ಮೊದಲಾದ ಕಾರ್ಯಕ್ರಮಗಳನ್ನು 7 ದಿನಗಳ ಕಾಲ ಮೈಸೂರು, ಟಿ.ನರಸೀಪುರ, ಕೆ.ಆರ್.ನಗರ, ನಂಜನಗೂಡು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಡಾ.ಉಮೇಶ್ ಜಿ. ಉಪಸ್ಥಿತರಿದ್ದರು.

Leave a Reply

comments

Related Articles

error: