
ಮೈಸೂರು
ಪೇಜಾವರ ಶ್ರೀಗಳ ಗಡಿಪಾರಿಗೆ ಒತ್ತಾಯಿಸಿ ಪ್ರತಿಭಟನೆ : ಜ್ಞಾನಪ್ರಕಾಶ ಸ್ವಾಮೀಜಿ
ಮೈಸೂರು, ನ.28 : ಪೇಜಾವರ ಶ್ರೀಗಳು ಉಡುಪಿಯಲ್ಲಿ ಧರ್ಮ ಸಂಸತ್ ಹೆಸರಿನಲ್ಲಿ ದೇಶ ಒಡೆಯುವ ಕೆಲಸವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ, ಸಭೆಯಲ್ಲಿ ಸಂವಿಧಾನ ಕುರಿತಂತೆ ಹಗುರವಾಗಿ ನೀಡಿರುವ ಹೇಳಿಕೆ ಹಿಂಪಡೆಯದಿದ್ದರೆ ಅವರನ್ನು ರಾಜ್ಯದಿಂದ ಗಡೀಪಾರು ಮಾಡಬೇಕೆಂದು ಒತ್ತಾಯಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಉರಿಲಿಂಗಿಪೆದ್ದೇಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾರತದ ಮೂಲ ನಿವಾಸಿಗಳ ಟ್ರಸ್ಟ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ರಾಮ, ಕೃಷ್ಣ, ಏಸು, ಅಲ್ಲಾ ದೇಶ ಕಟ್ಟಲಿಲ್ಲ, ಅವು ಕೇವಲ ಭಾವನಾತ್ಮವಾಗಿರಲಿ. ಆದರೆ ದೇಶದ ಅಖಂಡತೆ ಇರುವುದು ಸಂವಿಧಾನದಲ್ಲಿ. ಹೀಗಾಗಿ ಸಂವಿಧಾನ ಬದಲಾಯಿಸಬೇಕು ಎಂದು ಹೇಳಿಕೆ ನೀಡುವುದು, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಪ್ರಶ್ನಿಸುವುದು ತರವಲ್ಲ. ಈ ಬಗ್ಗೆ ಪೇಜಾವರ ಶ್ರೀಗಳೇನಾದರೂ ಬಹಿರಂಗ ಚರ್ಚಾ ಸಭೆ ಏರ್ಪಡಿಸಿದಲ್ಲಿ ದಾಖಲೆ ಸಮೇತ ತಮ್ಮ ವಾದ ಸಮರ್ಥಿಸಿಕೊಳ್ಳುವುದಾಗಿ ನುಡಿದರು.
ವಯೋವೃದ್ಧತೆ ಸಹಜದಿಂದಾಗಿ ಹಲವಾರು ಗೊಂದಲ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಕೋಮುಭಾವನೆಗೆ ಧಕ್ಕೆ ತರುತ್ತಿದ್ದಾರೆ, ಅವರಿಗೆ ಮಾನೋಚಿಕಿತ್ಸೆ ಅವಶ್ಯವಿದ್ದು ತಕ್ಷಣವೇ ನೀಡಬೇಕಾಗಿದೆ ಎಂದು ವ್ಯಂಗ್ಯವಾಡಿದ ಅವರು, ದಲಿತರ ಬಗ್ಗೆ ಪ್ರೀತಿಯಿದ್ದರೆ ಬನ್ನಿ ನನ್ನೊಂದಿಗೆ ಸಹ ಭೋಜನ ಮಾಡಿ ಎಂದು ಶ್ರೀಗಳಿಗೆ ಆಹ್ವಾನ ನೀಡಿದರು.
30 ಸಾವಿರ ರೂ. ನೀಡಿ ಮೊಬೈಲ್ ಖರೀದಿಸುವವರು ಕತ್ತಿಯನ್ನೂ ಖರೀದಿಸಿ, ನಾಲ್ಕು ಮಕ್ಕಳನ್ನು ಹೊಂದಿರಿ ಎಂಬಿತ್ಯಾದಿ ಹೇಳಿಕೆಗಳು ಅಸಂಬದ್ಧವಾಗಿದ್ದು, ಭಯೋತ್ಪಾದಕರ ಕೃತ್ಯದಂತೆಯೂ ಇವೆ. ಪಾದಯಾತ್ರೆ ವೇಳೆ ದಲಿತರ ಮನೆಯಲ್ಲಿ ಒಂದು ಲೋಟ ನೀರನ್ನೂ ಕುಡಿಯದ ಸ್ವಾಮೀಜಿ, ನಕಲಿ ಹಿಂದುತ್ವವಾದಿಯಾಗಿದ್ದಾರೆ. ಹೀಗಾಗಿ ಮೃಗದಂತೆ ಮಾತನಾಡುವ ಅವರಿಗೆ ದೇಶದ ಅಖಂಡತೆ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ ಎಂದು ಕಟುವಾಗಿ ಟೀಕಿಸಿದರು.
ತಲಕಾಡು ನಾಗರಾಜು, ತುಂಬಲ ರಾಮಣ್ಣ, ಬಿ. ಮೂರ್ತಿ, ಇತರರು ಇದ್ದರು. (ವರದಿ : ಕೆ.ಎಂ.ಆರ್)