ಕರ್ನಾಟಕಪ್ರಮುಖ ಸುದ್ದಿಮೈಸೂರು

ಜಾತ್ಯಾತೀತ ತತ್ವದಲ್ಲಿ ಬದ್ಧತೆ ಇರುವ ಪಕ್ಷಕ್ಕೆ ಮತ ಹಾಕಿ ಎಂದು ಚಂಪಾ ಹೇಳುವುದರಲ್ಲಿ ತಪ್ಪೇನಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ನ.29:-  ಜಾತ್ಯಾತೀತ ತತ್ವದಲ್ಲಿ ಬದ್ಧತೆ ಇರುವ ಪಕ್ಷಕ್ಕೆ ಮತ ಹಾಕಿ ಎಂದು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಅವರು ಹೇಳಿರುವುದರಲ್ಲಿ ತಪ್ಪೇನಿದೆ. ಕುಂಬಳ ಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಜಾತ್ಯತೀತವಾದಿಗಳಾಗಿದ್ದರೆ ಚಂದ್ರಶೇಖರ ಪಾಟೀಲ ಅವರ ಭಾಷಣದ ಬಗ್ಗೆ ಮಾತನಾಡುವಂತೆಯೇ ಇಲ್ಲ ಎಂದು ತಿಳಿಸಿದರು. ಚಂದ್ರಶೇಖರ ಪಾಟೀಲರ ಹೇಳಿಕೆ ವಿರೋಧಿಸುವುದಾದರೆ ಬಿಜೆಪಿಯವರಿಗೆ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಲ್ಲ ಎಂದು ಅರ್ಥ. ಜಾತ್ಯತೀತ ತತ್ವದಲ್ಲಿ ನಂಬಿಕೆ ಇರಬೇಕು ಎಂದು ಸಂವಿಧಾನದಲ್ಲೇ ಹೇಳಲಾಗಿದೆ. ಹೀಗಿರುವಾಗ ಚಂಪಾ ಅವರ ಭಾಷಣದಲ್ಲಿ ಹೊಸದೇನಿದೆ. ಅದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ನೀಡುವ ಅಗತ್ಯವೇನಿದೆ ? ಚಂಪಾ ಅವರು ಕೋಮುವಾದಿಗಳ ಪರವಾಗಿ ಮಾತನಾಡಬೇಕಿತ್ತೇ  ಎಂದು ಪ್ರಶ್ನಿಸಿದರು. ಚಂಪಾ ಅವರ ಹೇಳಿಕೆ ವಿರೋಧಿಸುವ ಮೂಲಕ ಬಿಜೆಪಿಯವರು ತಾವು ಕೋಮುವಾದಿಗಳು ಎಂದು ತೋರಿಸಿಕೊಂಡಿದ್ದಾರೆ ಎಂದು ಹೇಳಿದರು. ಸಾಹಿತಿಗಳನ್ನು ಬಳಸಿಕೊಂಡು ರಾಜಕೀಯ ಮಾಡುವ ಅಗತ್ಯತೆ ನಮಗಿಲ್ಲ. ನಮ್ಮದು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಎಂದು ಹೇಳಿದರು.  ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ಬರುವ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದು ನಿಜ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮನಾಗಿ ಅಭಿವೃದ್ಧಿ ಮಾಡುವ ಜವಾಬ್ದಾರಿ ಕೇಂದ್ರದ ಮೇಲೆ ಇದೆ.  ರಾಜ್ಯಗಳ ಮೂಲಕ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ಅದರಲ್ಲಿ ಶೇ. 42ರಷ್ಟನ್ನು ಮಾತ್ರ ರಾಜ್ಯಗಳಿಗೆ ನೀಡುತ್ತದೆ. ಇದು ಹಣಕಾಸು ಆಯೋಗದ ಶಿಫಾರಸು ಪ್ರಕಾರ ನಡೆಯುವ ಪ್ರಕ್ರಿಯೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ರಾಜ್ಯಕ್ಕೆ 1550 ಕೋಟಿ ರೂ.ಗಳ ಅನುದಾನ ನಿಗದಿಯಾಗಿದೆ. ಆದರೆ ಮಹಾರಾಷ್ಟ್ರಕ್ಕೆ 8500 ಕೋಟಿ ರೂ., ಗುಜರಾತ್‍ಗೆ 4 ಸಾವಿರ ಕೋಟಿ ರೂ. ಮಂಜೂರಾಗಿದೆ. ರಾಜಸ್ಥಾನ ಹೊರತುಪಡಿಸಿದರೆ ಹೆಚ್ಚು ಒಣಭೂಮಿ ಪ್ರದೇಶ ಇರುವ ರಾಜ್ಯ ನಮ್ಮದು. ಆದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಕೊಡುತ್ತಿರುವ ಅನುದಾನ ಕಡಿಮೆ. ಈ ತಾರತಮ್ಯ ಸರಿಯಲ್ಲ ಎಂದರು.  ಸಚಿವ ವಿನಯ ಕುಲಕರ್ಣಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ವಿನಯ್ ಕುಲಕರ್ಣಿಗೂ  ಯೋಗೀಶ್ ಗೌಡ ಅವರ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಎಫ್‍ಐಆರ್ ನಲ್ಲಿ ಕುಲಕರ್ಣಿ ಅವರ ಹೆಸರು ಇದೆಯೇ,  ಸಚಿವರು ಯಾರಿಗೂ ಬೆದರಿಕೆ ಹಾಕಿಲ್ಲ. ಅದಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವೇ ? ಅದಕ್ಕಾಗಿಯೇ ಕುಮಾರಸ್ವಾಮಿಯವರು ಈ ರೀತಿ ಹೇಳಿಕೊಳ್ಳುತ್ತಾರೆ. ಹೇಳಿಕೊಳ್ಳಲಿ ಬಿಡಿ ಎಂದು ತಿಳಿಸಿದರು. ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಮಾಡುವಾಗ ತಾವೂ ಸೇರಿದಂತೆ ಎಲ್ಲರೂ ಒಳ್ಳೆಯ ಭಾಷೆ ಬಳಸಬೇಕು. ಸಂಸ್ಕೃತಿ ಇರಬೇಕು. ಸಂಸದೀಯ ಪದಗಳನ್ನು ಬಳಕೆ ಮಾಡಬೇಕು. ಬಾಯಿಗೆ ಬಂದಂತೆ ಹಾಗೂ ಏಕ ವಚನದಲ್ಲಿ ಮಾತನಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

 

ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ರಾಜ ಮನೆತನದವರಿಗೆ ಆಹ್ವಾನ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ  ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಕನ್ನಡ ಸಾಹಿತ್ಯ ಪರಿಷತ್. ಸರ್ಕಾರ ಕೇವಲ ಹಣಕಾಸು ನೆರವು ಒದಗಿಸುತ್ತದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: