ದೇಶಪ್ರಮುಖ ಸುದ್ದಿ

ಕೇಂದ್ರದಿಂದ ರಸಗೊಬ್ಬರ ಸಬ್ಸಿಡಿ ರೈತರ ಖಾತೆಗೆ ನೇರ ವರ್ಗಾವಣೆ : ಯೋಜನೆ ಜಾರಿಗೆ ಸಿದ್ಧತೆ

ಬೆಂಗಳೂರು (ನ.29): ಭಾರತ ಸರಕಾರವು ರಸಗೊಬ್ಬರಗಳ ಮಾರಾಟದಲ್ಲಿ ಸುಧಾರಣೆ ತರುವ ಸಲುವಾಗಿ ಹಾಗು ರೈತ ಫಲಾನುಭವಿಗೆ ರಸಗೊಬ್ಬರ ತಲುಪುತ್ತಿದೆಯೇ ಎಂದು ತಿಳಿಯುವ ಸಲುವಾಗಿ ನೇರ ನೆರವು ವರ್ಗಾವಣೆ (Direct Benefit Transfer (DBT) for fertilizer Subsidy Payment) ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಜನವರಿ, 01, 2018 ರಿಂದ ರಸಗೊಬ್ಬರಗಳಿಗೆ ಸಹಾಯಧನ ನೀಡುವ ನೇರ ನೆರವು ವರ್ಗಾವಣೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿರುವ ಎಲ್ಲಾ ಚಿಲ್ಲರೆ ಮಾರಾಟಗಾರರಿಗೆ POS (Point of Sale) ಉಪಕರಣವನ್ನು ವಿತರಿಸಲಾಗುತ್ತಿದ್ದು, ಚಿಲ್ಲರೆ ಮಾರಾಟಗಾರರು ತಮ್ಮಲ್ಲಿರುವ ಸಹಾಯಧನ ನೀಡಲ್ಪಡುವ ರಸಗೊಬ್ಬರಗಳನ್ನು ಈ ಉಪಕರಣದ ಮುಖಾಂತರವೇ ಕಡ್ಡಾಯವಾಗಿ ಮಾರಾಟ ಮಾಡಲು ಸೂಚಿಸಲಾಗಿರುತ್ತದೆ.

2018ರ ಜ.1ರಿಂದ POS ಉಪಕರಣವನ್ನು ಬಳಸದೇ ಸಹಾಯಧನ ನೀಡಲ್ಪಡುವ ರಸಗೊಬ್ಬರಗಳನ್ನು ಮಾರಾಟ ಮಾಡುವಂತಿಲ್ಲ. ಅಂತಹ ಮಾರಾಟಗಾರರ ರಸಗೊಬ್ಬರ ಮಾರಾಟ ಪರವಾನಗಿಯನ್ನು ಯಾವುದೇ ನೋಟೀಸನ್ನು ನೀಡದೇ ರದ್ದುಗೊಳಿಸಲಾಗುವುದು.

ಈ POS ಉಪಕರಣದ ಮೂಲಕ ಮಾರಾಟ ಮಾಡಿರುವ ರಸಗೊಬ್ಬರಗಳ ಪ್ರಮಾಣಕ್ಕೆ ಮಾತ್ರ ಸಹಾಯಧನವನ್ನು ಆಯಾ ರಸಗೊಬ್ಬರ ತಯಾರಿಕಾ ಸಂಸ್ಥೆಗಳಿಗೆ ನೀಡಲಾಗುತ್ತದೆ. ರಸಗೊಬ್ಬರಗಳ ಒಟ್ಟು ಬೆಲೆಯನ್ನು ನೀಡಿ ಖರೀದಿಸಲು ರೈತರಿಗೆ ದುಬಾರಿಯಾಗುತ್ತದೆಂಬ ಉದ್ದೇಶದಿಂದ ರೈತರು ಗರಿಷ್ಠ ಮಾರಾಟ ಬೆಲೆ (MRP) ಯನ್ನೇ ಪಾವತಿಸಿ ರಸಗೊಬ್ಬರವನ್ನು ಖರೀದಿಸಲು ಅನುವು ಮಾಡಿಕೊಡಲಾಗಿದೆ.

ಆದರೆ ರಸಗೊಬ್ಬರಗಳನ್ನು POS ಉಪಕರಣದ ಮುಖಾಂತರ ಖರೀದಿಸಲು ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆಯನ್ನು ನೀಡಬೇಕಾಗಿರುತ್ತದೆ. ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ಸಂಖ್ಯೆಯು ಅಗತ್ಯವಾಗಿರುವುದರಿಂದ ರೈತರು ಆಧಾರ್ ಸಂಖ್ಯೆಯನ್ನು ತಮ್ಮ ಬಳಿಯಲ್ಲಿರಿಸಿಕೊಳ್ಳುವುದು ಉತ್ತಮ.

ಇನ್ನು ಮುಂದೆ ರೈತರು ಆಧಾರ್ ಸಂಖ್ಯೆಯ ಮಾಹಿತಿಯನ್ನು ಚಿಲ್ಲರೆ ಮಾರಾಟಗಾರರಿಗೆ ನೀಡಿ ತಮ್ಮ ಹೆಬ್ಬೆರಳಿನಿಂದ ಅನುಮೋದಿಸಿದರೆ ಮಾತ್ರ ರಸಗೊಬ್ಬರಗಳನ್ನು ಖರೀದಿಸಲು ಸಾಧ್ಯ. ಆಧಾರ್ ಕಾರ್ಡಿನ ಮಾಹಿತಿಯನ್ನು ಕೇವಲ ರಸಗೊಬ್ಬರಗಳ ಖರೀದಿಗಾಗಿ ಬಳಸಲು ಉಪಯೋಗಿಸಲಾಗುತ್ತದೆ. ಆದ್ದರಿಂದ ರೈತರು ರಸಗೊಬ್ಬರಗಳನ್ನು ಖರೀದಿಸಲು ತಪ್ಪದೇ ಆಧಾರ್ ಸಂಖ್ಯೆಯನ್ನು ನೀಡಿ ಸಹಕರಿಸಲು ತಿಳಿಸಿದೆ.

(ಎನ್‍ಬಿಎನ್‍)

Leave a Reply

comments

Related Articles

error: