ದೇಶಪ್ರಮುಖ ಸುದ್ದಿ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಲಕ್ಷ ದ್ವೀಪದತ್ತ `ಒಕ್ಹಿ’ ಚಂಡಮಾರುತ

ಚೆನ್ನೈ,ನ.30-ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಒಕ್ಹಿ ಚಂಡಮಾರುತ ಲಕ್ಷ ದ್ವೀಪದತ್ತ ಧಾವಿಸುತ್ತಿದ್ದು, ದಕ್ಷಿಣ ಕರಾವಳಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ.

ಪ್ರಮುಖವಾಗಿ ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಗಂಟೆಗೆ ಸುಮಾರು 150 ಕಿ.ಮೀ ವೇಗದಲ್ಲಿ ಒಕ್ಹಿ ಚಂಡಮಾರುತ ಲಕ್ಷ ದ್ವೀಪದತ್ತ ಧಾವಿಸುತ್ತಿದೆ. ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಭಾರತದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ.

ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಹಲವೆಡೆ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಹೇಳಿದ್ದು, ಈಗಾಗಲೇ ತಮಿಳುನಾಡಿನ ತೂತುಕುಡಿ, ಟುಟಿಕಾರನ್, ತಿರುನೆಲ್ವೇಲಿ, ಕನ್ಯಾಕುಮಾರಿ, ವಿರುದುನಗರ್ ಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರಸ್ತುತ ಕನ್ಯಾಕುಮಾರಿ ತೀರದಿಂದ ಸುಮಾರು 170 ಕಿ.ಮೀ ದೂರದಲ್ಲಿ ಒಕ್ಹಿ ಚಂಡಮಾರುತ ಬೀಸುತ್ತಿದ್ದು, ಪರಿಣಾಮ ಚೆನ್ನೈ ಕರಾವಳಿ ತೀರದಲ್ಲಿ ನಿನ್ನೆ ರಾತ್ರಿಯಿಂದ ಇಂದು ಮುಂಜಾನೆಯವರೆಗೂ ಸುಮಾರು 6 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ಯಾಕುಮಾರಿ, ಚೆನ್ನೈ, ಲಕ್ಷದ್ವೀಪ ಸೇರಿದಂತೆ ಕರಾವಳಿ ತೀರದಲ್ಲಿ ಭಾರಿ ಅಲೆಗಳು ಸೃಷ್ಟಿಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ನೀರಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. (ವರದಿ-ಎಂ.ಎನ್)

 

Leave a Reply

comments

Related Articles

error: