ದೇಶಪ್ರಮುಖ ಸುದ್ದಿ

ಪದ್ಮಾವತಿ ಚಿತ್ರ ವಿವಾದ: ಹತ್ಯೆ ಬೆದರಿಕೆ ಒಡ್ಡುವುದು ತರವಲ್ಲ ಎಂದ ನಾನಾ ಪಾಟೇಕರ್‍

ಪುಣೆ (ನ.30): ಬಾಲಿವುಡ್ ಚಿತ್ರ “ಪದ್ಮಾವತಿ” ವಿವಾದಕ್ಕೆ ಸಂಬಂಧಪಟ್ಟಂತೆ ಚಿತ್ರನಿರ್ದೇಶಕ ಸಂಜಯ್‍ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ ಪಡುಕೋಣೆ ಅವರಿಗೆ ಹತ್ಯೆ ಬೆದರಿಕೆ ಒಡ್ಡಿರುವುದು ಒಪ್ಪಿಕೊಳ್ಳುವಂಥದ್ದಲ್ಲ ಎಂದು ಖ್ಯಾತ ನಟ ನಾನಾ ಪಾಟೇಕರ್ ಹೇಳಿದ್ದಾರೆ.

“ಚಿತ್ರದಲ್ಲಿ ಪಾತ್ರಗಳನ್ನು ಹೇಗೆ ಕಟ್ಟಿಕೊಡಲಾಗಿದೆ ಎಂಬುದು ನನಗಿನ್ನೂ ತಿಳಿದಿಲ್ಲ. ಏಕೆಂದರೆ ಚಿತ್ರವನ್ನು ನಾನಿನ್ನೂ ನೋಡಿಲ್ಲ. ಚಿತ್ರ ನೋಡಿದ ಬಳಿಕವಷ್ಟೇ ನಾನು ಪ್ರತಿಕ್ರಿಯೆ ನೀಡಬಹುದು. ಆದರೆ ನಟಿ ಮತ್ತು ಚಿತ್ರದ ನಿರ್ದೇಶಕರಿಗೆ ಹತ್ಯೆ ಬೆದರಿಕೆ ಒಡ್ಡಿರುವುದು ಸಂಪೂರ್ಣ ತಪ್ಪು” ಎಂದು ಪಾಟೇಕರ್ ತಿಳಿಸಿದ್ದಾರೆ. ಪುಣೆಯಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕಳೆದ ವಾರ ಪದ್ಮಾವತಿ ಚಿತ್ರವನ್ನು ನಿಷೇಧಿಸುವಂತೆ ಕೋರಿ ಸುಪ್ರೀಮ್‍ ಕೋರ್ಟ್‍ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಮಾಡಿತ್ತು. ಚಿತ್ರಕ್ಕೆ ಪ್ರಮಾಣಪತ್ರ ನೀಡುವ ವಿಷಯ ಕೇಂದ್ರೀಯ ಸಿನಿಮಾ ಸೆನ್ಸಾರ್ ಮಂಡಳಿ (ಸಿಬಿಎಫ್‍ಸಿ) ಮುಂದಿರುವಾಗ ತಾನು ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಸಂಜಯ್‍ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಕಲಾತ್ಮಕವಾಗಿ ನಿರ್ಮಾಣ ಮಾಡಿರುವ “ಪದ್ಮಾವತಿ” ಚಿತ್ರದ ಮುಖ್ಯ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ರಣ್‍ವೀರ್‍ ಸಿಂಗ್‍, ಶಾಹಿದ್‍ ಕಪೂರ್‍ ನಟಿಸಿದ್ದಾರೆ.

ಚಿತ್ರದದಲ್ಲಿ ಐತಿಹಾಸಿಕ ಸತ್ಯಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ರಜಪೂತ್ ಕರಣಿ ಸೇನಾ ಹಾಗೂ ಇತರ ಹಿಂದೂ ಸಂಘಟನೆಗಳು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಮಾತ್ರವಲ್ಲ ರಜಪೂತ ರಾಣಿಯ ಬಗ್ಗೆ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿರುವ ರಜಪೂತ ಕರಣಿಸೇನಾ ಸದಸ್ಯರು ನಿರ್ದೇಶಕ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ತಲೆತೆಗೆದವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದವು.

(ಎನ್‍ಬಿಎನ್‍)

Leave a Reply

comments

Related Articles

error: