ಕರ್ನಾಟಕ

ಕೊಡಗು ಪೊಲೀಸರು ಜನಸ್ನೇಹಿಯಾಗ್ತಾರಂತೆ : ಇದಕ್ಕಾಗಿ ನಡೆಯಿತು ಕಾರ್ಯಾಗಾರ

ರಾಜ್ಯ(ಮಡಿಕೇರಿ) ನ.30 :- ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರ ನಿರ್ದೇಶನದಂತೆ ಕೊಡಗಿನ ಪೊಲೀಸರು ಜನಸ್ನೇಹಿಗಳಾಗಲು ಹೊರಟಿದ್ದಾರೆ.

ಸಾರ್ವಜನಿಕರೊಂದಿಗೆ ಬಾಂಧವ್ಯವನ್ನು ವೃದ್ಧಿಕೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಾಗಿ “ಜನಸ್ನೇಹಿ ಪೊಲೀಸ್” ಎಂಬ ಉಪ ವಿಭಾಗ ಮಟ್ಟದ ಕಾರ್ಯಾಗಾರವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ, ವಿರಾಜಪೇಟೆ ಹಾಗೂ ಕುಶಾಲನಗರದಲ್ಲಿ ನಡೆಯಿತು. ಪೊಲೀಸ್ ಠಾಣೆಗೆ ಆಗಮಿಸುವ ದೂರುದಾರರು ಹಾಗೂ ಸಾರ್ವಜನಿಕರೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಲಹೆಗಳನ್ನು ನೀಡಲಾಯಿತು. ಈ ಕಾರ್ಯಾಗಾರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಒಳಗೊಂಡಂತೆ ನಾಲ್ಕು ತಂಡಗಳನ್ನಾಗಿ ರಚಿಸಿ, ಸಾರ್ವಜನಿಕರೊಂದಿಗೆ ನಡೆದುಕೊಳ್ಳಬೇಕಾದ ರೀತಿ, ಸುಧಾರಿತ ಗಸ್ತು ವ್ಯವಸ್ಥೆ, ಮಾಹಿತಿ ಕಲೆ ಹಾಕುವಿಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ಮಾಡುವ ಜವಾಬ್ದಾರಿಯನ್ನು ನೀಡಲಾಯಿತು. ಉತ್ತಮ ಪ್ರಾತ್ಯಕ್ಷಿಕೆ ಮಾಡಿದ ತಂಡಕ್ಕೆ ಬಹುಮಾನವನ್ನು ವಿತರಿಸಲಾಯಿತು.

ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಭಾಗವಹಿಸಿ ಪೊಲೀಸರು ಹಾಗೂ ಸಾರ್ವಜನಿಕರ ಬಾಂಧವ್ಯ ವೃದ್ಧಿಸುವ ಕಾರ್ಯಕ್ರಮಗಳು ನಡೆಯುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಸಾರ್ವಜನಿಕರಿಗೆ ಹತ್ತಿರವಾಗಿಸುವ ಮೊದಲ ಹಂತದಲ್ಲಿ ನ.30 ರಿಂದ ಎಲ್ಲಾ ಪೊಲೀಸ್ ಠಾಣೆಯಲ್ಲಿ ಸ್ವಾಗತಕಾರ, ಸ್ವಾಗತಗಾರ್ತಿಯರನ್ನು ನೇಮಿಸಿ, ಪೊಲೀಸ್ ಠಾಣೆಗೆ ಬರುವ ಎಲ್ಲಾ ನೊಂದವರು, ದೂರುದಾರೊಂದಿಗೆ ಸಹಾನುಭೂತಿಯಿಂದ ಸ್ಪಂದಿಸುವ ಕಾರ್ಯವನ್ನು ಪ್ರಾರಂಭಿಸುತ್ತಿರುವುದಾಗಿ ಎಸ್‍ಪಿ ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: