ಮೈಸೂರು

ವಾಯುಭಾರ ಕುಸಿತದಿಂದ ತಮಿಳುನಾಡಿಗೆ ‘ಓಖಿ’ ಚಂಡಮಾರುತ ದಾಳಿ : ಮೈಸೂರಿನಲ್ಲೂ ತುಂತುರು ಮಳೆ

ಮೈಸೂರು,ಡಿ.1:- ನೈರುತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತಮಿಳುನಾಡಿಗೆ ‘ಓಖಿ’ ಚಂಡಮಾರುತ ದಾಳಿ ನಡೆಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದರ ಪ್ರಭಾವ ಮೈಸೂರಿಗೂ ತಟ್ಟಿದಂತಿದ್ದು ಶುಕ್ರವಾರ ಮುಂಜಾನೆಯಿಂದಲೇ ತುಂತುರು ಮಳೆ ಸುರಿಯುತ್ತಿದೆ.

ತಮಿಳುನಾಡಿನಲ್ಲಿ ಸುಮಾರು 150ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಅಷ್ಟೇ ಬಿರುಸಿನಿಂದ ಮಳೆ ಕೂಡ ಸುರಿಯುತ್ತಿದೆ. ರಾಜ್ಯ ರಾಜಧಾನಿಯಲ್ಲಿ ನಿನ್ನೆ ಮಳೆ ಸುರಿದಿದೆ ಎನ್ನಲಾಗಿದೆ. ಆದರೆ ಮೈಸೂರಿನಲ್ಲಿ ನಿನ್ನೆ ದಿನವಿಡೀ ಮೋಡ ಕವಿದ ವಾತಾವರಣ, ಜೊತೆ ಕುಳಿರ್ಗಾಳಿಯಿತ್ತು. ಸಂಜೆಯ ವೇಳೆ ಗಾಳಿ ಜೋರಾಗಿಯೇ ಬೀಸುತ್ತಿತ್ತು. ಶುಕ್ರವಾರ ಬೆಳಗಿನ ವೇಳೆ ತುಂತುರು ಮಳೆ ಹನಿ ಸುರಿಯುತ್ತಿದ್ದು, ಜನತೆಯ ಮುಖದಲ್ಲಿ ಬೇಸರದ ಛಾಯೆ ಕಂಡು ಬಂದಿದೆ. ಬೆಳಗ್ಗಿನಿಂದನೇ ಸಣ್ಣಸಣ್ಣ ಹನಿಗಳು ಬೀಳತೊಡಗಿದ್ದು ಶಾಲೆ ಕಾಲೇಜಿಗೆ ತೆರಳುವವರು, ಕೆಲಸ ಕಾರ್ಯಗಳಿಗೆ ತೆರಳುವವರು ತೊಂದರೆ ಅನುಭವಿಸುವಂತಾಯಿತು. ಜೋರಾಗಿ ಗಾಳಿ ಬೀಸಿದರೂ ಮರದಿಂದ ರಾಶಿ ರಾಶಿ ಎಲೆಗಳು ಉದುರಿರುವುದು ಬಿಟ್ಟರೆ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.

ಇನ್ನೂ ಎರಡು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: