ಪ್ರಮುಖ ಸುದ್ದಿಮೈಸೂರು

ಹುಣಸೂರು ಪಟ್ಟಣದಲ್ಲಿ ಬಿಗಿಬಂದೋಬಸ್ತ್ : ಪ್ರಚೋದನಾಕಾರಿ ಭಾಷಣಗಳನ್ನು ಮಾಡುವವರ ವಿರುದ್ಧ ದೂರು ದಾಖಲಿಸಲಾಗುವುದು ; ರವಿ.ಡಿ.ಚನ್ನಣ್ಣನವರ್

ಮೈಸೂರು,ಡಿ.1:-  ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ಇಂದಿನಿಂದ ಹನುಮಾನ್ ಜಯಂತಿ ಕಾರ್ಯಕ್ರಮ ಹಾಗೂ ನಾಳೆ ಈದ್ ಮಿಲಾದ್ ಹಬ್ಬ ಇರುವುದರಿಂದ ಬಿಗಿಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಣಸೂರು ಪಟ್ಟಣದಲ್ಲಿ ಎರಡೂ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡೂ ಸಮುದಾಯಗಳ ಜನರು ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಕೆಲ ಮಾರ್ಗಗಳಲ್ಲಿ ವಾಹನಗಳ ಸಂಚಾರವನ್ನು ಬದಲಾಯಿಸಲಾಗಿದೆ.ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸ್ಥಳೀಯ ಜನಪ್ರತಿನಿಧಿಗಳ ಜೊತೆಯೂ ಮಾತುಕತೆ ನಡೆಸಲಾಗಿದೆ. ಈಗಾಗಲೇ 12ಜನರನ್ನು ಗಡಿಪಾರು ಮಾಡಲಾಗಿದೆ, ಯಾವುದೇ ಅಹಿತಕರ ಘಟನೆ ನಡೆದರೂ 20ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. ಶಾಂತಿ ಸುವ್ಯವಸ್ಥೆಗಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಚೋದನಾಕಾರಿ ಭಾಷಣಗಳನ್ನು ಮಾಡುವವರ ವಿರುದ್ಧ ದೂರು ದಾಖಲಿಸಲಾಗುವುದು. ಹುಣಸೂರು ಪಟ್ಟಣದಾದ್ಯಂತ ನಾಳೆಯಿಂದ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಮೆರವಣಿಗೆ ಸಾಗುವ ಮಾರ್ಗಗಳನ್ನು ಹೊರತುಪಡಿಸಿ ಹುಣಸೂರು ಪಟ್ಟಣದಾದ್ಯಂತ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಭದ್ರತೆಗಾಗಿ ಹುಣಸೂರಿನಾದ್ಯಂತ 1500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.

ಕಳೆದ 2015ರಲ್ಲಿ ಹನುಮಜಯಂತಿ ಮೆರವಣಿಗೆ ಸಾಗುವ ವೇಳೆ ಎರಡು ಸಮುದಾಯಗಳ ಜನರ ನಡುವೆ ಗುಂಪುಘರ್ಷಣೆ ಉಂಟಾಗಿದ್ದರಿಂದ ಮುನ್ನೆಚ್ಚರಿಕೆಯಾಗಿ ಈ ಬಾರಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: