ಕರ್ನಾಟಕಮನರಂಜನೆಮೈಸೂರು

ಸೆಪ್ಟೆಂಬರ್ 12-13: ಬಡಗು ಯಕ್ಷ ವೈಭವ

ಮೈಸೂರಿನ ಇನೊವೇಟಿವ್ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಸೆಪ್ಟೆಂಬರ್ 12-13ರಂದು ಯಕ್ಷಗಾನ ಮತ್ತು ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸೆಪ್ಟೆಂಬರ್ 12ರ ಕಾರ್ಯಕ್ರಮವನ್ನು ಬೆಳ್ಳಿಪ್ಪಾಡಿ ಯಕ್ಷ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೆಳ್ಳಿಪ್ಪಾಡಿ ಸತೀಶ್ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಡಾ.ಎಂ. ಜಗನ್ನಾಥ ಶೆಣೈ ಮತ್ತು ಚಾಮರಾಜನಗರದ ಜಿ.ಎಂ. ಹೆಗಡೆ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಯಕ್ಷಗಾನ ವಿದ್ವಾಂಸ ಜಿ.ಎಸ್. ಭಟ್ ವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳದವರಿಂದ ವಾಲೀ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸೆಪ್ಟೆಂಬರ್ 13 ರಂದು ಸಂಜೆ 4 ಗಂಟೆಗೆ ಯಕ್ಷ‘ಗಾನಕೋಗಿಲೆ’ ಸುಬ್ರಾಯ ಸಂಪಾಜೆ ಭಾಗವತಿಕೆಯಲ್ಲಿ ಪಾರ್ಥಸಾರಥ್ಯ ತಾಳಮದ್ದಳೆ ನಡೆಯಲಿದ್ದು, ಯಕ್ಷಗಾನ ಮಹಾಕವಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಯಕ್ಷಗಾನ ಚಿಂತಕ ಪ್ರೊ.ಎಂ.ಎ.ಹೆಗಡೆ, ಕಲಾ ವಿಮರ್ಶಕ ಗ.ನಾ. ಭಟ್ಟ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಕಾರಿ ಧುರೀಣ ಕೆ. ರಘುರಾಂ ಭಾಗವಹಿಸಲಿದ್ದಾರೆ.

ಸಂಜೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಪ್ರೊ.ಎಂ.ಎ.ಹೆಗಡೆ ಅವರಿಗೆ ಶಾಸ್ತ್ರೀಯ ಭಾಷೆ ಕನ್ನಡ ಉನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಪಿ.ಕೆ.ಖಂಡೋಬಾ ಪ್ರದಾನಿಸಲಿದ್ದಾರೆ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಸಚಿವ ಡಾ. ನಿರಂಜನ ವಾನಳ್ಳಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಎಚ್ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಜಿ.ಎಸ್.ಭಟ್ ವಹಿಸಲಿದ್ದಾರೆ. ಬಳಿಕ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳದಿಂದ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ. ಕೆರೆಮನೆ ಶಿವಾನಂದ ಹೆಗಡೆ ಎರಡು ದಿನಗಳ ಆಖ್ಯಾನವನ್ನು ಸಂಯೋಜಿಸಿ ನಿರ್ದೇಶಿಸಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಇನೊವೇಟಿವ್ ಅಧ್ಯಕ್ಷ ಜಿ.ಎಸ್. ಭಟ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9448354541ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: