ದೇಶಪ್ರಮುಖ ಸುದ್ದಿ

ಬ್ಯಾಲೆಟ್ ಪೇಪರ್ ಬಳಸಿದರೆ ಬಿಜೆಪಿಗೆ ಸೋಲು: ಮಾಯಾವತಿ ಭವಿಷ್ಯ

ಲಖನೌ(ಡಿ.2): ಬ್ಯಾಲೆಟ್ ಪೇಪರ್‍ ಬಳಸಿ ಚುನಾವಣೆ ನಡೆಸಿದರೆ 2019ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಶುಕ್ರವಾರ ಹೊರ ಬಿದ್ದ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ನಂತರದ ಸ್ಥಾನವನ್ನು ಬಿಎಸ್ಪಿ ಪಡೆದುಕೊಂಡಿದೆ. ಒಟ್ಟು 16 ಮೇಯರ್ ಸ್ಥಾನಗಳಲ್ಲಿ ಬಿಜೆಪಿ 14ರಲ್ಲಿ ಗೆದ್ದಿದ್ದರೆ ಬಿಎಸ್ಪಿ 2 ನಗರಗಳಲ್ಲಿ ಗೆಲುವು ಸಾಧಿಸಿ ತನ್ನ ಶಕ್ತಿಯನ್ನು ಮರಳಿ ಪ್ರದರ್ಶಿಸಿದೆ.

ಇದಾದ ಬಳಿಕ ಮಾಯಾವತಿ ಅವರು ಹೇಳಿಕೆ ನೀಡಿದ್ದು, “ನಾನು ಈ ಮಾತನ್ನು ದೃಢ ವಿಶ್ವಾಸದಿಂದ ಹೇಳುತ್ತಿದ್ದೇನೆ. ವಿದ್ಯುನ್ಮಾನ ಮತಯಂತ್ರಗಳ ಬದಲು ಬ್ಯಾಲೆಟ್‍ ಪೇಪರ್ ಬಳಸಿ ಚುನಾವಣೆ ನಡೆಸಿದರೆ ಬಿಜೆಪಿ ಖಂಡಿತಾ ಅಧಿಕಾರ ಕಲೆದುಕೊಳ್ಳುತ್ತದೆ” ಎಂದು ಹೇಳಿದರು.

“ಇಡೀ ದೇಶವೇ ತಮ್ಮ ಪರವಾಗಿದೆ ಎನ್ನುವ ಬಿಜೆಪಿಗೆ, ಜನಾಭಿಪ್ರಾಯವನ್ನು ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಹೇಳುವ ಬಿಜೆಪಿಗರಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಿಟ್ಟು ಬ್ಯಾಲೆಟ್ ಪೇಪರ್‍ ಬಳಸಿ ಚುನಾವಣೆ ನಡೆಸಲು ಧೈರ್ಯವಿಲ್ಲವೇ? ಎಂದು ಪ್ರಶ್ನಿಸಿರುವ ಅವರು, 2019ರ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಬಳಸಿ ನಡೆಸಿದರೆ ಬಿಜೆಪಿ ನಿಜವಾಗಿಯೂ ಅಧಿಕಾರಕ್ಕೆ ಬರುವುದಿಲ್ಲ” ಎಂದು ಮಾಯಾವತಿ ಅವರು ಪುನರುಚ್ಚರಿಸಿದರು.

“ಬಹುಸಂಖ್ಯಾತರಾದ ಹಿಂದುಳಿದ ವರ್ಗ, ಮುಸ್ಲಿಂ ಸಮುದಾಯ ಹಾಗೂ ಅಲ್ಪ ಸಂಖ್ಯಾತರು ನಮಗೇ ಮತಹಾಕಿದ್ದಾರೆ. ಸರ್ಕಾರ ಮತಯಂತ್ರವನ್ನು ದುರುಪಯೋಗಪಡಿಸಿಕೊಳ್ಳದಿದ್ದರೆ ಬಿಎಸ್‍ಪಿಯೇ ಹೆಚ್ಚಿನ ನಗರಗಳಲ್ಲಿ ಅಧಿಕಾರಕ್ಕೆ ಬರುತ್ತಿತ್ತು” ಎಂದೂ ಹೇಳುವ ಮೂಲಕ ಮಾಯಾವತಿಯವರು ತಮ್ಮ ಪಕ್ಷವನ್ನು ತಮ್ಮದೇ ಶೈಲಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: