ಮೈಸೂರು

ಹುಣಸೂರಿನಲ್ಲಿ ಹನುಮಮಾಲಾಧಾರಿಗಳ ಮೇಲೆ ಲಾಠಿ ಚಾರ್ಜ್-ಬಂಧನಕ್ಕೆ ಖಂಡನೆ : ಪ್ರತಿಭಟನೆ

ಮೈಸೂರು,ಡಿ.3:- ಹುಣಸೂರಿನಲ್ಲಿ ಹನುಮಮಾಲಾಧಾರಿಗಳ ಮೇಲೆ ಲಾಠಿ ಚಾರ್ಜ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಐನೂರಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.

ಬಂಟಿಂಗ್ಸ್, ಬ್ಯಾನರ್ ಕಟ್ಟುವ ಕಾರ್ಯಕರ್ತರು ಹಾಗೂ ವಯೋವೃದ್ದರನ್ನೂ ಒಳಗೊಂಡು ನೂರಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ರೌಡಿ ಲಿಸ್ಟ್, ಇಪ್ಪತ್ತು ಕಾರ್ಯಕರ್ತರ ಗಡಿಪಾರು ಸೇರಿದಂತೆ ಹನುಮ ಜಯಂತಿ ಮೆರವಣಿಗೆಗೆ ಅಡ್ಡಿ ಪಡಿಸಿದ ರಾಜ್ಯ ಸರ್ಕಾರ ಪೊಲೀಸರ ದುರ್ಬಳಕೆ ಮಾಡಿಕೊಂಡಿದ್ದರ ವಿರುದ್ದ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಬಳಿ “ಹಿಂದೂ ಸಂಘಟನೆಗಳ ಒಕ್ಕೂಟ”ದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಹಿಂದೂ ಮುಖಂಡರಾದ ಕುಮಾರ್ ಗೌಡ, ಸಂಜಯ್, ರಾಕೇಶ್ ಭಟ್, ಸಂದೇಶ್, ಸಂತೋಷ್, ಬೆಟ್ಟಪ್ಪ, ಗಧಾಧರ, ಮಹೇಶ್, ಬೆಟ್ಟಪ್ಪ, ಬಾಲು ಸೇರಿದಂತೆ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಘಟನೆಯ ವಿವರ : ಹನುಮ ಮೆರವಣಿಗೆಗೆ ಆಗಮಿಸುತ್ತಿದ್ದ ಸಂಸದ ಪ್ರತಾಪ್ ಸಿಂಹ ಸೇರಿದಂತೆ ನೂರಕ್ಕೂ  ಹೆಚ್ಚು ಹನುಮ ಮಾಲಾಧಾರಿಗಳನ್ನು ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದು, ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಪಟ್ಟಣದ ಕೆಲ ರಸ್ತೆಗಳಲ್ಲಿರುವ ಅಂಗಡಿ, ಮುಂಗಟ್ಟುಗಳು ವ್ಯಾಪಾರ ನಡೆಸಲು ಭಯಭೀತರಾಗಿದ್ದಾರೆ. ಹನುಮ ಭಕ್ತರು ಪಟ್ಟಣದ ಹಲವು ಕಡೆ ಗುಂಪು ಗುಂಪಾಗಿ ಸೇರಿ ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲು ಯತ್ನಿಸಿದರಾದರೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಸಹಜವಾಗಿ ಹನುಮ ಭಕ್ತರ ಕೋಪ ಹೆಚ್ಚಾಗಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಮಾತನಾಡಿ, ನಾವು ಕಾನೂನು ಉಲ್ಲಂಘಿಸಿಲ್ಲ. ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕದಡುವ ಯತ್ನವನ್ನೂ ಮಾಡಿಲ್ಲ. ಆದರೂ, ಸ್ಥಳೀಯ ಪೊಲೀಸರ ಮೂಲಕ ಹಿಂದುಗಳ ಹಬ್ಬವನ್ನು ಹತ್ತಿಕ್ಕುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಿರುವ ಅದ್ಧೂರಿ ಮೆರವಣಿಗೆಯನ್ನು ಶಾಂತಿಯುತವಾಗಿ  ನಡೆಸಬೇಕೆಂಬುದೇ ನಮ್ಮ ಉದ್ದೇಶವಾಗಿದೆ. ಆದರೆ ಪೊಲೀಸ್ ಇಲಾಖೆ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹನುಮ ಮೂರ್ತಿಯನ್ನು ಯಾರಾದರೂ ಮುಟ್ಟಿದ್ದೇ ಆದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿವರ್ಷ ಹನುಮ ಜಯಂತ್ಯುತ್ಸವ ಸಮಿತಿಯವರು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತ  ಬಂದಿದ್ದು, ಕಳೆದ ವರ್ಷ ನಡೆದ ಗಲಾಟೆ ಹಾಗೂ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಹೊರಡಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಸಂಸದ ಪ್ರತಾಪ್ ಸಿಂಹ ಅವರು ಹುಣಸೂರು ಪಟ್ಟಣಕ್ಕೆ ಬರುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕರೆದೊಯ್ದರು. ಹಾಗೆಯೇ ಮುನೇಶ್ವರ ಕಾವಲು ಮೈದಾನದಲ್ಲಿ ಜಮಾಯಿಸಿದ್ದ  100ಕ್ಕೂ ಹೆಚ್ಚು ಮಂದಿ ಹನುಮ ಭಕ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದು, ಮೂರು ಬಸ್ಸಿನಲ್ಲಿ ಕರೆದೊಯ್ದರು. ಇದರಿಂದ ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: