ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಾರಿಗೆ ಸಂಸ್ಥೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡ ವಿದ್ಯಾರ್ಥಿಯನ್ನು ಭೇಟಿ ಮಾಡಿದ ಹೆಚ್.ಎಂ.ರೇವಣ್ಣ

ಮೈಸೂರು,ಡಿ.4;- ಸಾರಿಗೆ ಸಂಸ್ಥೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಯನ್ನು ಭೇಟಿ ಮಾಡಿದ ಸಾರಿಗೆ ಸಚಿವ ರೇವಣ್ಣ, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಜತೆಗೆ ವಿದ್ಯಾರ್ಥಿಯ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಭರವಸೆ ನೀಡಿದರು.

ನಗರದ ಖಾಸಗಿ ಶಾಲೆ ವಿದ್ಯಾರ್ಥಿ ಉಲ್ಲೇಖ್ ಪುಟ್ಟಸ್ವಾಮಿ ಊರಿಗೆ ತೆರಳುವ ಸಲುವಾಗಿ ಬಸ್ ಹತ್ತಲು ಮುಂದಾದಾಗ, ಬಸ್ ಪಾಸ್ ವಿದ್ಯಾರ್ಥಿ ಎಂಬ ಕಾರಣಕ್ಕೆ ಬಸ್ ನಿರ್ವಾಹಕ ಅನುಚಿತವಾಗಿ ವರ್ತಿಸಿದ ಪರಿಣಾಮ ವಿದ್ಯಾರ್ಥಿ ಉಲ್ಲೇಖ್ ಬಸ್ ನಿಂದ ಆಯತಪ್ಪಿ ಬಿದ್ದು ಆತನ ಮೇಲೆ ಬಸ್ ಚಕ್ರ ಹರಿದು ಕಾಲು ಕಳೆದುಕೊಳ್ಳುವಂತಾಗಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗುತ್ತಿದ್ದಂತೆ ಖಚಿತ ಮಾಹಿತಿ ಪಡೆದು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿತ್ತು.

ಇದೀಗ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರೇ ಖುದ್ದು ಮೈಸೂರಿಗೆ ಆಗಮಿಸಿ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ರೇವಣ್ಣ, ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಗಾಯಗೊಂಡಿರುವ ವಿದ್ಯಾರ್ಥಿಯ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದರು. ಜತೆಗೆ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಆತನ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರಕಾರವೇ ನೋಡಿಕೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು. ವಿದ್ಯಾರ್ಥಿ ಉಲ್ಲೇಖ್ ಪುಟ್ಟಸ್ವಾಮಿ ಅವರ ತಂದೆ ಬನ್ನೂರು ಪುಟ್ಟಸ್ವಾಮಿ, ಮಗನಿಗಾದ ಅವಘಡಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಸಾರಿಗೆ ಸಚಿವ ರೇವಣ್ಣ, ಸಾಂತ್ವನ ಹೇಳಿ ಖುದ್ದು ಆಗಮಿಸಿ ಪುತ್ರನ ಆರೋಗ್ಯ ವಿಚಾರಿಸುವ ಆಶ್ವಾಸನೆ ನೀಡಿದ್ದರು. ಅದರಂತೆ ಇಂದು ಮೈಸೂರಿಗೆ ಆಗಮಿಸಿದ್ದ ಸಾರಿಗೆ ಸಚಿವ ರೇವಣ್ಣ, ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: