ಕರ್ನಾಟಕ

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಉಪ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಗ್ರೀನ್ ಸಿಗ್ನಲ್

ರಾಜ್ಯ(ಮಂಡ್ಯ)ಡಿ.5:- ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ರೈತರ ಜೀವನಾಡಿಯಾದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಉಪ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಲು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಗ್ರೀನ್ ಸಿಗ್ನಲ್ ತೋರಿದೆ.

ಪಿಎಸ್‍ಎಸ್‍ಕೆ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಅಧಿಕಾರಿ ಶೈನಿತ್‍ಕುಮಾರ್ ಪುಟ್ಟಣ್ಣಯ್ಯ ಅವರ ಪ್ರಸ್ತಾವನೆಯನ್ನು ಒಪ್ಪಿ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಕೋರಿದರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಪಿಎಸ್‍ಎಸ್‍ಕೆ ಕಾರ್ಖಾನೆಯಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಿಲ್ಲಾದ್ಯಂತ ಸುಮಾರು 30 ಸಾವಿರ ಜನರಿಗೆ ಉದ್ಯೋಗ ಸೃಷ್ಠಿಯಾಗಿದೆ. ಸಾವಿರಾರು ಕುಟುಂಬಗಳ ಕಾರ್ಖಾನೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ರೈತರ ಅನುಕೂಲಕ್ಕಾಗಿ ಮತ್ತು ಕಾರ್ಖಾನೆಯನ್ನು ಆರ್ಥಿಕವಾಗಿ ಸದೃಢಪಡಿಸಲು ಉಪ ಉತ್ಪನ್ನಗಳ ತಯಾರಿಕಾ ಘಟಕ ಪ್ರಾರಂಭಿಸಬೇಕಾದುದು ಅನಿವಾರ್ಯವಾಗಿದೆ ಎಂದರಲ್ಲದೇ, ಕಾರ್ಖಾನೆಯಲ್ಲಿ ಪ್ರಮುಖವಾಗಿ ವಿದ್ಯುತ್ ಘಟಕ, ಡಿಸ್ಟಿಲರಿ ಘಟಕ, ಸೇರಿದಂತೆ ಹಲವಾರು ಉಪ ಉತ್ಪನ್ನಗಳನ್ನು ತಯಾರಿಸಬಹುದು. ಕಾರ್ಖಾನೆಯ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಆರ್ಥಿಕ ನೆರವು ನೀಡಬೇಕು ಎಂದು ಕೋರಿದರು.

ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಅಧಿಕಾರಿ ಶೈನಿತ್ ಕುಮಾರ್ ಮಾತನಾಡಿ, ದುಃಸ್ಥಿತಿಯಲ್ಲಿರುವ ದೇಶದ ಎಲ್ಲಾ ರೀತಿಯ ಆಹಾರ ಉತ್ಪನ್ನ ಘಟಕಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಕಾರ್ಯೋನ್ಮುಖವಾಗಿದೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಮುಖ ಆಹಾರ ಉತ್ಪಾದನಾ ಘಟಕವಾಗಿದ್ದು, ಕಾರ್ಖಾನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲು ಅಗತ್ಯವಾದ ನೆರವು ಮತ್ತು ಕಾರ್ಖಾನೆಯಲ್ಲಿ ಸಕ್ಕರೆಯನ್ನು ಹೊರತುಪಡಿಸಿ ತಯಾರಿಸಬಹುದಾದ ಉಪ ಉತ್ಪನ್ನಗಳು ಮತ್ತು ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಕ್ಕೆ ಅಗತ್ಯವಾದ ಹಣದ ಬಗ್ಗೆ ಅಂದಾಜು ಪಟ್ಟಿ ಹಾಗೂ ತಾಂತ್ರಿಕ ವಿವರಗಳನ್ನು ಡಿ.8 ರೊಳಗೆ ಸಲ್ಲಿಸಿದರೆ ಡಿ.10 ರಂದು ದೆಹಲಿಯಲ್ಲಿ ಶಾಸಕ ಪುಟ್ಟಣ್ಣಯ್ಯ ನೇತೃತ್ಬದಲ್ಲಿ ಪಿಎಸ್‍ಎಸ್‍ಕೆ ಮುಖ್ಯಸ್ಥರು ಮತ್ತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಕೇವಲ 2 ತಿಂಗಳಲ್ಲಿ ಹಣ ಬಿಡುಗಡೆ ಮಾಡಿಸಬಹುದು ಎಂದರು. ಈ ಸಂದರ್ಭದಲ್ಲಿ ಪಿಎಸ್‍ಎಸ್‍ಕೆ ಅಧ್ಯಕ್ಷ ಹಾರೋಹಳ್ಳಿ ನಂಜುಂಡೇಗೌಡ, ಉಪಾಧ್ಯಕ್ಷ ಎಚ್.ಎಲ್.ಪ್ರಕಾಶ್, ನಿರ್ದೇಶಕ ರಾಮದಾಸ್, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಜಯಂತ್ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: