ಕರ್ನಾಟಕಪ್ರಮುಖ ಸುದ್ದಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ತೀವ್ರಗೊಳಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಾಹಿತಿಗಳ ಬಂಧನ : ಬಿಡುಗಡೆ

ರಾಜ್ಯ(ಬೆಂಗಳೂರು)ಡಿ.5:- ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಸಂಬಂಧ ರಾಜ್ಯ ಸರ್ಕಾರ ತನಿಖೆ ತೀವ್ರಗೊಳಿಸಬೇಕೆಂದು ಒತ್ತಾಯಿಸಿ ಗೌರಿ ಲಂಕೇಶ್ ಬಳಗದ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಾಹಿತಿಗಳು, ಪ್ರಗತಿಪರ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ನಗರದಲ್ಲಿಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಗೌರಿ ಲಂಕೇಶ್ ಬಳಗದ ನೇತೃತ್ವದಲ್ಲಿ ವಿಚಾರವಾದಿಗಳ ಹತ್ಯೆ ಖಂಡಿಸಿ, ಪ್ರಗತಿಪರರರು ಬೃಹತ್ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾವರೆಗೆ ರ್‍ಯಾಲಿ ನಡೆಸಲು ಮುಂದಾದರು. ಈ ವೇಳೆ ಸಾಹಿತಿಗಳಾದ ಚಂದ್ರಶೇಖರ ಪಾಟೀಲ್,. ಕೆ.ಎಲ್. ಅಶೋಕ್, ಕೆ.ನೀಲಾ ಮತ್ತಿತರ ನಾಯಕರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ಗೌರಿ ಅವರ ಹತ್ಯೆಯಾಗಿ ಇಂದಿಗೆ 90 ದಿನಗಳು ಕಳೆದಿವೆ. ಆದರೂ ಇದುವರೆಗೂ ಹಂತಕರ ಬಂಧನವಾಗಿಲ್ಲ. ತನಿಖೆಯೂ ಚುರುಕುಗೊಂಡಿಲ್ಲ ಎಂಬ ಅನುಮಾನವಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗೌರಿ ಹತ್ಯೆಯಾಗಿ ಮೂರು ತಿಂಗಳು, ವಿಚಾರವಾದಿ ಡಾ.ಎಂ.ಎಂ. ಕಲ್ಬುರ್ಗಿಯವರ ಹತ್ಯೆಯಾಗಿ 30 ತಿಂಗಳುಗಳು ಕಳೆದಿವೆ. ಆದರೂ ಒಬ್ಬ ಆರೋಪಿಯ ಬಂಧನವೂ ಆಗಿಲ್ಲ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಲಿದೆ. ಸ್ವತಂತ್ರವಾಗಿ ಮಾತನಾಡುವ ಹಕ್ಕು ಕಸಿದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಗೌರಿ ಲಂಕೇಶ್ ಸಹೋದರಿ,  ಕವಿತಾ ಲಂಕೇಶ್ ಮಾತನಾಡಿ, ಹಂತಕರ ಬಂಧನ ಶೀಘ್ರವಾಗಬೇಕು. ಇಲ್ಲದಿದ್ದರೆ, ತನಿಖೆಯ ತೀವ್ರತೆ ಕಡಿಮೆಯಾಗುತ್ತದೆ ಹಾಗೂ ರಾಜ್ಯ ಸರ್ಕಾರದ ಮೇಲೆ ಭರವಸೆಯೂ ಇಲ್ಲದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್,ವಕೀಲರಾದ ಅನಂತ್ ನಾಯಕ್, ಹಿರಿಯ ಸಾಹಿತಿ ಕೆ. ನೀಲಾ, ತ್ರಿಮೂರ್ತಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: