
ದೇಶಪ್ರಮುಖ ಸುದ್ದಿ
ಮೆವಾನಿ ಬೆಂಗಾವಲು ವಾಹನದ ಮೇಲೆ ಬಿಜೆಪಿ ಬೆಂಬಲಿಗರಿಂದ ಕಲ್ಲು ತೂರಾಟ
ಅಹ್ಮದಾಬಾದ್,ಡಿ.6-ಗುಜರಾತ್ ವಿಧಾಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದಲಿತ ನಾಯಕ ಜಿಗ್ನೇಶ್ ಮೆವಾನಿಯವರ ಬೆಂಗಾವಲು ವಾಹನದ ಮೇಲೆ ಬಿಜೆಪಿ ಬೆಂಬಲಿಗರು ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೆವಾನಿಯ ಬೆಂಗಾವಲು ವಾಹನಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ವಾಹನದ ಕಿಟಕಿಯ ಗಾಜು ಪುಡಿಪುಡಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಮೆವಾನಿ ಮತ್ತೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ಕುರಿತು ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ ಎಂದು ಬನಸ್ಕಾಂತ್ ಎಸ್ಪಿ ನೀರಜ್ ಹೇಳಿದ್ದಾರೆ.
ತಕರ್ವಾಡ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿ ಸೋಲುವ ಭೀತಿಯಲ್ಲಿದ್ದು, ಹೀಗಾಗಿ ಇಂತಹ ಕೃತ್ಯ ನಡೆಸುತ್ತಿದೆ. ಆದರೆ, ನಾನು ಕ್ರಾಂತಿಕಾರಿ. ಇದಕ್ಕೆಲ್ಲಾ ಹೆದರಿ ಓಡಲಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಬಲ್ಲ ಅಭ್ಯರ್ಥಿಗಳ ಮೇಲೆ ದಾಳಿ ನಡೆಸುವುದು ನಿಮ್ಮ ಯೋಜನೆಯೋ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷರ(ಅಮಿತ್ಶಾ) ಯೋಜನೆಯೋ ನೀವೇ ಹೇಳಿ. ಇದು ಗುಜರಾತ್ ನ ಸಂಪ್ರದಾಯ ಅಲ್ಲವೇ ಅಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮೆವಾನಿ ಟ್ವಿಟ್ ಮಾಡಿದ್ದಾರೆ.
ಮೆವಾನಿ ಬನಸ್ಕಾಂತ್ ಜಿಲ್ಲೆಯ ವಡಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ನ ಬಾಹ್ಯ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ವಡಗಾಮ್ ಕ್ಷೇತ್ರ ಎಸ್ಸಿ ಅಭ್ಯರ್ಥಿಗೆ ಮೀಸಲಾಗಿದೆ. (ವರದಿ-ಎಂ.ಎನ್)