ಮೈಸೂರು

ಮಧುಮೇಹದ ಕುರಿತು ಸಾರ್ವತ್ರಿಕ ತಿಳುವಳಿಕೆ ಅಗತ್ಯ : ಡಾ.ಬಸವನಗೌಡ

ಮಧುಮೇಹ ದೀರ್ಘಕಾಲಿಕ ಕಾಯಿಲೆಯಾಗಿದ್ದು ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತೀವರ್ಷ ನ.14ರಂದು ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಹಾಗೂ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಬಸವನಗೌಡ ತಿಳಿಸಿದರು.

ಸೋಮವಾರ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿ ಜೆಎಸ್‍ಎಸ್ ಆಸ್ಪತ್ರೆ, ಜೆಎಸ್‍ಎಸ್ ಶುಶ್ರೂಷಕರ ಶಾಲೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮವನ್ನು ಡಾ.ಬಸವನಗೌಡ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಧುಮೇಹ ಇಂದು ವಯಸ್ಸಿನ ಮಿತಿ ಇಲ್ಲದೆ ಹುಟ್ಟುವ ಮಕ್ಕಳಿಂದ, ವಯೋವೃದ್ಧರವರೆಗೂ ಎಲ್ಲಾ ವಯೋಮಾನದವರಲ್ಲೂ ಕಂಡುಬರುವ ಕಾಯಿಲೆಯಾಗಿ ಪರಿಣಮಿಸಿದೆ. ಇದರ ಬಗ್ಗೆ ಸಾರ್ವತ್ರಿಕ ತಿಳುವಳಿಕೆಯ ಅಗತ್ಯತೆ ಇದ್ದು ಇದರ ದುಷ್ಪರಿಣಾಮಗಳನ್ನು ಜನರಿಗೆ ತಿಳಿಸುವ ಅವಶ್ಯಕತೆ ಇದೆ ಎಂದರು. ಮಧುಮೇಹದಿಂದ ಅಂಗಾಂಗ ವೈಫಲ್ಯ, ಕಣ್ಣು ಕಾಣದೆ ಇರುವುದು ಸೇರಿದಂತೆ ಅನೇಕ ದೈಹಿಕ ಊನತೆಗಳಾಗುತ್ತವೆ. ಹಾಗಾಗಿ ಈ ಕಾಯಿಲೆಯ ಬಗ್ಗೆ ಹೆಚ್ಚೆಚ್ಚು ತಿಳುವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

ಜೆಎಸ್‍ಎಸ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ್ ಮಾತನಾಡಿ ಮಧುಮೇಹ ಇಂದು ಸಾಮಾನ್ಯ ಕಾಯಿಲೆಯಂತಾಗಿದ್ದು ಹೆಚ್ಚಾಗಿ ಚಿಕ್ಕ ವಯಸ್ಸಿನವರಲ್ಲೇ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಿರ್ಲಕ್ಷ್ಯತೋರುತ್ತಿರುವುದು. ನಮ್ಮ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಬೇಕು. ಅದರಲ್ಲೂ ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆ ಬಗ್ಗೆ ಅತಿಯಾದ ಕಾಳಜಿ ವಹಿಸಬೇಕು. ಇದರಿಂದ ಮಧುಮೇಹ ಬಾರದಂತೆ ತಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್, ವೈದ್ಯಕೀಯ ಅಧೀಕ್ಷಕ ಎಂ.ಎಸ್.ಗುರುಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: