ಮೈಸೂರು

ಸಚಿವ ಸೇಠ್ ಏಳಿಗೆ ಸಹಿಸದವರಿಂದ ಪಿತೂರಿ: ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್

ಸಚಿವ ತನ್ವೀರ್ ಸೇಠ್ ಅವರು ಯಾವುದೇ ತಪ್ಪು ಮಾಡಿ‍ಲ್ಲ. ಹಾಗಾಗಿ ಅವರು ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ವತಿಯಿಂದ ಸೋಮವಾರ ಮೈಸೂರಿನ ಎಫ್‍ಟಿಎಸ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಸಚಿವ ಸೇಠ್ ಅವರು ಕಳೆದ 25 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಎಲ್ಲರ ಪ್ರೀತಿ ಹಾಗೂ ಅಭಿಮಾನವನ್ನು ಗಳಿಸಿದ್ದಾರೆ. ಹೀಗಿರುವಾಗ ಸಚಿವರು ಅರೆನಗ್ನ ಚಿತ್ರ ನೋಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ನಾಚಿಕೆಯಾಗಬೇಕು.

ಟಿಪ್ಪು ಜಯಂತಿಯ ಆಚರಣೆ ಕುರಿತಂತೆ ಮೊಬೈಲ್‍ನಲ್ಲಿ ಮಾಹಿತಿ ತೆಗೆದುಕೊಳ್ಳುತ್ತಿದ್ದ ವೇಳೆ ಯಾರೋ ಕಳುಹಿಸಿರುವ ಅಶ್ಲೀಲ ಮೆಸೇಜ್ ಓಪನ್ ಆಗಿದೆ. ಅದನ್ನು ಅವರು ಸಂಪೂರ್ಣವಾಗಿ ನೋಡಿರುವುದಿಲ್ಲ. ಈಗ ಅವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳು ಅವರ ತೇಜೋವಧೆ ಮಾಡಲು ಮತ್ತು ಅವರ ಏಳಿಗೆ ಸಹಿಸದವರು ಮಾಡುತ್ತಿರುವ ಪಿತೂರಿಯಾಗಿದೆ. ಹಾಗಾಗಿ ಸಚಿವ ಸೇಠ್ ಯಾವುದೇ ಕಾರಣಕ್ಕೆ ರಾಜೀನಾಮೆ ನೀಡಬಾರದೆಂದು ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ಆಗ್ರಹಿಸಿತು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ನಾಗೇಶ್ ಕಾರ್ಯಪ್ಪ, ರಘು, ಶಕತ್‍ ಅಲಿಖಾನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: