ಮೈಸೂರು

ವೈಜ್ಞಾನಿಕ ತಳಹದಿಯೇ ಇಲ್ಲದವರು ವಿಜ್ಞಾನ ಪರಿಷತ್ತಿನಲ್ಲಿ ಸ್ಥಾನ ಪಡೆದಿದ್ದಾರೆ: ಎ.ಎನ್.ಮಹೇಶ್

ವೈಜ್ಞಾನಿಕ ತಳಹದಿಯೇ ಇಲ್ಲದವರು, ಮೌಢ್ಯತೆ ಬಿತ್ತುವವರು, ಅಧಿಕಾರ ದುರಾಸೆಯಿಂದ ವಿಜ್ಞಾನ ಪರಿಷತ್ತಿನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಚುನಾವಣಾ ಅಭ್ಯರ್ಥಿ ಚಿಕ್ಕಮಗಳೂರಿನ ಎ.ಎನ್.ಮಹೇಶ್ ಲೇವಡಿ ಮಾಡಿದರು.

ಅವರು, ಸೋಮವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 2016ನೇ ಸಾಲಿನ ತ್ರೈವಾರ್ಷಿಕ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಪರಿಷತ್ತಿನ ಚಟುವಟಿಕೆಗಳನ್ನು ಮುಕ್ತವಾಗಿಸಬೇಕು. ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ತಾಲೂಕು ಹಾಗೂ ಜಿಲ್ಲಾ ಘಟಕಗಳನ್ನು ಬಲಿಷ್ಠಗೊಳಿಸಬೇಕು. ನೋಂದಾಯಿತ ಸದಸ್ಯರಿಗೆ ಪರಿಷತ್ ಕಾರ್ಯಚಟುವಟಿಕೆಗಳ ಸಂದೇಶಗಳನ್ನು ಮೊಬೈಲ್‍ಗಳಲ್ಲಿ ಕಾಲಕಾಲಕ್ಕೆ ತಲುಪಿಸಬೇಕು. ಅಂಚೆ ಮತಪತ್ರ ವ್ಯವಸ್ಥೆಯನ್ನು ಬದಲಾಯಿಸಿ ಸಾರ್ವತ್ರಿಕ ಚುನಾವಣೆಯಂತೆ ಮತಪೆಟ್ಟಿಗೆಯ ಮೂಲಕ ಮತದಾನವಾಗಬೇಕು ಎಂದು ಆಗ್ರಹಿಸಿದರು.

ಬೆಂಗಳೂರು, ಬೆಳಗಾವಿ ಸೇರಿದಂತೆ ಪರಿಷತ್ತಿನ ನಾಲ್ಕು ವಿಭಾಗಗಳಲ್ಲಿ 7887 ಜನ ಸದಸ್ಯರಿದ್ದು ಮೈಸೂರು ವಿಭಾಗದಲ್ಲಿ 1350 ಜನ ಸದಸ್ಯತ್ವ ಹೊಂದಿದ್ದಾರೆ. ಪ್ರಸ್ತುತ ಮೈಸೂರು ವಿಭಾಗದಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ವಿಜ್ಞಾನ ಹಿನ್ನೆಲೆಯಿಂದ ಬಂದವರಾಗಿದ್ದು ಸದಾ ಸಕ್ರಿಯರಾಗಿದ್ದೇವೆ. ಪರಿಸರ ಪೂರಕ ಜನಸ್ನೇಹಿ ವಿಜ್ಞಾನವನ್ನು ಎಲ್ಲೆಡೆ ಪಸರಿಸಲು ಪ್ರಯತ್ನಿಸಲಾಗುತ್ತಿದೆ.  ಆರೋಗ್ಯ ಜಾಥಾ, ಬೀದಿ ನಾಟಕಗಳ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ವಿಜ್ಞಾನದ ಅರಿವನ್ನು ಮೂಡಿಸಲು ಪ್ರಯತ್ನಿಸುತ್ತೇವೆ ಎನ್ನುವ ಆಶ್ವಾಸನೆಯನ್ನು ನೀಡಿ ಅಂಚೆ ಪತ್ರಗಳು ತಲುಪಿದ ಕೂಡಲೇ ಮತ ಚಲಾಯಿಸಿ ಡಿ.14ರೊಳಗೆ ಕಚೇರಿಗೆ ತಲುಪಿಸಿ ಎಂದು ಮನವಿ ಮಾಡಿದರು.

ಡಾ.ಎಚ್.ಆರ್. ಸ್ವಾಮಿ, ಮಂಡ್ಯದ ಮಮತ ಬಿ.ಜೆ., ಪಾಂಡವಪುರದ ಯು.ಎಸ್. ಮಹೇಶ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: