
ದೇಶಪ್ರಮುಖ ಸುದ್ದಿ
ವೈದ್ಯಕೀಯ ಚಿಕಿತ್ಸೆಗಾಗಿ 8 ಮಂದಿ ಪಾಕಿಸ್ತಾನಿಗಳಿಗೆ ವೀಸಾ ಮಂಜೂರು
ನವದೆಹಲಿ,ಡಿ.7-ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಎಂಟು ಮಂದಿ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಮಂಜೂರು ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸುಷ್ಮಾ ಸ್ವರಾಜ್, ಪಾಕಿಸ್ತಾನಿ ಪ್ರಜೆಗಳಾದ ಶಹಬಾರ್ ಬೀಬಿ, ಝಹೀರುದ್ದೀನ್ ಬಾಬರ್, ವಝೀರ್ ಖಾನ್, ಇರ್ಫಾನ್ ಅಲಿ ಚಂಡಿಯೊ ಎಂಬವರಿಗೆ ಲಿವರ್ ಕಸಿ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ಮಂಜೂರು ಮಾಡಿದ್ದೇವೆ. ತಕ್ಷಣ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಅನ್ನು ಸಂಪರ್ಕಿಸಿ ಎಂದು ಟ್ವಿಟ್ ಮಾಡಿದ್ದಾರೆ.
ಇದಲ್ಲದೇ ಪಾಕಿಸ್ತಾನಿ ಪ್ರಜೆಗಳಾದ ಮಿರ್ ಮೊಹ್ಮದ್ ಶಾಹಿದ್, ನಿಖಿಲ್ರಾಜ್, ಜಾಫರುಲ್ಲಾ ಹಾಗೂ ಜಮಾತ್ ಮಲ್ ಎಂಬವರಿಗೂ ಭಾರತದಲ್ಲಿ ಚಿಕಿತ್ಸೆ ಪಡೆಯಲು ವೀಸಾ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ವೈದ್ಯಕೀಯ ವೀಸಾಗಳನ್ನು ಪಾಕಿಸ್ತಾನಿ ಪ್ರಜೆಗಳಿಗೆ ಮಂಜೂರು ಮಾಡಲು ಅನುಕಂಪದ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದು, ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಟ್ಟಿದ್ದರೂ, ಮಾನವೀಯತೆಯ ಆಧಾರದಲ್ಲಿ ಈ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. (ವರದಿ-ಎಂ.ಎನ್)