ಮೈಸೂರು

ಶಿಕ್ಷಣ ಕೇವಲ ಓದು ಬರಹಕ್ಕೆ ಮಾತ್ರ ಸೀಮಿತವಾಗಬಾರದು: ಶಿವಶಂಕರ್

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮಕ್ಕಳ ದಿನಾಚರಣೆಯ ಪ್ರಯುಕ್ತ ಮೈಸೂರು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸ್ಎಸ್ಎಲ್‍ಸಿ ಫಲಿತಾಂಶ ಉತ್ತಮ ಪಡಿಸುವ ಸಂಬಂಧ ‘ನೂರರತ್ತ ಮೈಸೂರು ಚಿತ್ತ’ ಎಂಬ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

‘ಗೆಲುವು’ ಕೈಪಿಡಿ ಮತ್ತು ಭಿತ್ತಿಪತ್ರ ಬಿಡುಗಡೆ ಮಾಡಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜಯಲಕ್ಷ್ಮಿ ರಾಜಣ್ಣ ಮಾತನಾಡಿ, ಎಲ್ಲ ಮಕ್ಕಳಲ್ಲೂ ಪ್ರತಿಭೆ ಅಡಗಿದೆ. ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸತ್ಪ್ರಜೆಗಳಾಗಿ ಹೊರಹೊಮ್ಮಿ. ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡು ದೇಶಕ್ಕೆ ಮಾದರಿಯಾಗಿ. ‘ನೂರರತ್ತ ಮೈಸೂರು ಚಿತ್ತ’ ಉದ್ದೇಶ ಒಳ್ಳೆಯದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ‘ಗೆಲುವು’  ಭಿತ್ತಿಪತ್ರದ ಬಗ್ಗೆ ಮಾತನಾಡಿದರು. ಶಿಕ್ಷಣ ಕೇವಲ ಓದು ಬರಹಕ್ಕೆ ಮಾತ್ರ ಸೀಮಿತವಾಗಬಾರದು. ಜ್ಞಾನ ಮತ್ತು ಕೌಶಲ್ಯ ವೃದ್ಧಿಗಾಗಿ ಓದಬೇಕು. ಇಂದು ಅಂಕ ಗಳಿಸುವುದೇ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಗುರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಔಚಿತ್ಯ ಬೆಳೆಯಬೇಕು. ಇದೇ ಅವರ ಸಮಾಜಕ್ಕೆ ನೀಡುವ  ಕೊಡುಗೆಯಾಗಿರುತ್ತದೆ.

ಸರ್ವಾಂಗೀಣ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವೃದ್ದಿಯಾಗಬೇಕು. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಮಕ್ಕಳು ಇಷ್ಟಪಡುವ ಕ್ಷೇತ್ರದಲ್ಲಿ ಬೆಳೆಯಲು ಬಿಡಬೇಕು. ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಪ್ರಯತ್ನಿಸಬೇಕು. ಇದು ಅವರ ಕರ್ತವ್ಯವಾಗಿದೆ. ಎಸ್ಎಸ್ಎಲ್‍ಸಿ ಫಲಿತಾಂಶವನ್ನು ಉತ್ತಮ ಪಡಿಸಲು ತಂದಿರುವ ಗೆಲುವು ಕೈಪಿಡಿ ಮತ್ತು ನೂರರತ್ತ ಮೈಸೂರು ಚಿತ್ತ ಎರಡು ಯೋಜನೆಗಳು ಅಂಕ ಗಳಿಸುವ ಉದ್ದೇಶದಿಂದಲೇ. ಆದರೆ ಇದು ಸರಿಯಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಪಂ ಸದಸ್ಯೆ ಚಂದ್ರಿಕಾ, ಭಾಗ್ಯ ಹಾಗೂ ಮೈಸೂರು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಕೆ. ಬಸಪ್ಪ ಭಾಗವಹಿಸಿದ್ದರು.

Leave a Reply

comments

Related Articles

error: