ಪ್ರಮುಖ ಸುದ್ದಿಮೈಸೂರು

ನಾನು ಸಂಸದನಾಗಿಯೇ ಮುಂದುವರಿಯುತ್ತೇನೆ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ : ಆರ್.ಧ್ರುವನಾರಾಯಣ್ ಸ್ಪಷ್ಟನೆ

ಮೈಸೂರು,ಡಿ.8:- ಕಾಂಗ್ರೆಸ್ ಪಕ್ಷವು ಎಲ್ಲ ಜಾತಿ, ಜನಾಂಗದವರನ್ನು ಸಮಾನ ಮನೋಭಾವದಿಂದ ಕಾಣುತ್ತಿದೆ ಎಂದು ಚಾಮರಾಜನಗರ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.

ತಿಲಕ್ ನಗರದಲ್ಲಿರುವ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2017-18ನೇ ಸಾಲಿನಲ್ಲಿ ಆಯ್ಕೆಗೊಂಡ 7 ಮಂದಿ ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ವಿತರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ  ಇತರೆ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ ಎಂಬ ಪ್ರಮುಖ ಅಸ್ತ್ರವನ್ನು ಬಳಸಿಕೊಳ್ಳುತ್ತವೆ. ಆದರೆ ಕಾಂಗ್ರೆಸ್ ಪಕ್ಷವು ಇದಕ್ಕೆ ವಿರುದ್ಧವಾಗಿದ್ದು, ಅದು ಸಮಾಜದ ಎಲ್ಲ ಜನಾಂಗದವರನ್ನು ಸಮಾನ ಮನೋಭಾವದಿಂದ ಕಾಣುವ ಪಕ್ಷವಾಗಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಪಾರ ಜನೋಪಯೋಗಿ ಕೆಲಸಗಳನ್ನು ಮಾಡಿದ್ದು, ಅವುಗಳು ರಾಜ್ಯದ ಜನತೆಯ ನೆನಪಿನಲ್ಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ವಿಜಯಿಯಾಗಿ ಮತ್ತೊಮ್ಮೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದಿಗೆ ಸರಿಯಾಗಿ 11 ವರ್ಷಗಳ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಯಗಳಿಸಿದ್ದರು. ಅವರು ಎಲ್ಲ ಜನಾಂಗದವರೊಂದಿಗೂ ಬೆರೆಯುವ ಮನೋಭಾವ ಹೊಂದಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರನ್ನು ಆ ಕ್ಷೇತ್ರದ ಜನತೆ ಎಂದಿಗೂ ಕೈಬಿಡುವುದಿಲ್ಲ ಎಂದು ತಿಳಿಸಿದರು. ಕೇಂದ್ರ ಸರ್ಕಾರದಲ್ಲಿ ನನ್ನ ಅವಧಿ ಇನ್ನೂ 1 ವರ್ಷ 5 ತಿಂಗಳು ಬಾಕಿಯಿದ್ದು, ಉಳಿದಿರುವಷ್ಟು ಅವಧಿಯಲ್ಲಿ ನಾನು ಸಂಸದನಾಗಿಯೇ ಮುಂದುವರಿಯುತ್ತೇನೆ. ಹಾಗಾಗಿ ನಾನು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: