ಪ್ರಮುಖ ಸುದ್ದಿಮೈಸೂರು

ಮುಖ್ಯಮಂತ್ರಿಯಾಗುವ ಅರ್ಹತೆ ಮೈಸೂರು ಭಾಗದ ಹಲವರಿಗಿತ್ತು :ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ಡಿ. 9:- ಅವಿಭಜಿತ ಮೈಸೂರು ಜಿಲ್ಲೆಯ ಹಲವಾರು ನಾಯಕರು ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದರು, ಆದರೆ ಡಿ. ದೇವರಾಜ ಅರಸು ಮತ್ತು ನನಗೆಮಾತ್ರ ಅವಕಾಶ ದೊರೆಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ‘ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ” ಕೃತಿಯನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಮೈಸೂರು ಭಾಗದ ಗುರುಪಾದಸ್ವಾಮಿ, ಬಿ. ರಾಚಯ್ಯ, ಎನ್.ರಾಚಯ್ಯ, ನಜೀರ್‍ಸಾಬ್, ಕೆ.ಪುಟ್ಟಸ್ವಾಮಿ, ಅಜೀಜ್ ಸೇಠ್, ಸಾಹುಕಾರ್ ಚೆನ್ನಯ್ಯ ಹೀಗೆ ಹಲವಾರು ನಾಯಕರು ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದರು. ಆದರೆ ಇಬ್ಬರಿಗೆ ಮಾತ್ರ ಅವಕಾಶ ದೊರೆಯಿತು. ಇಬ್ಬರೂ ಕಾಂಗ್ರೆಸ್ ಪಕ್ಷದಿಂದಲೇ ಮುಖ್ಯಮಂತ್ರಿ ಆದೆವು ಎಂದು ಹೇಳಿದರು. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ ಬರೆಯುವ ದೊಡ್ಡ ಪ್ರಯತ್ನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾಡಿದ್ದಾರೆ. ಎಲ್ಲಾ ರಾಜಕಾರಣಿಗಳ ಬಗ್ಗೆ ಒಂದು ಚಿತ್ರಣವನ್ನು ನಾಡಿನ ಜನತೆ ಮುಂದೆ ಇಟ್ಟಿದ್ದಾರೆ ಎಂದು ಪ್ರಶಂಸಿದರು. ಅಂಶಿ ಪ್ರಸನ್ನಕುಮಾರ್ ಅವರು ಯಾವತ್ತೂ ಪಕ್ಷಪಾತಿಯಾಗಿ ಕೆಲಸ ಮಾಡಿಲ್ಲ. ನಿಷ್ಪಕ್ಷಪಾತವಾಗಿ ಬರೆಯುತ್ತಾರೆ. ಪತ್ರಕರ್ತರಿಗೆ ಇರಬೇಕಾದ ಗುಣ ಅದು. ಇವರು ಅಪರೂಪದ ಪತ್ರಕರ್ತ ಎಂದರು. ಯಾವುದೇ ವೃತ್ತಿಯಲ್ಲಿ ಒಂದು ವೃತ್ತಿಧರ್ಮ ಇರುತ್ತದೆ. ಅದರ ಪಾಲನೆ ಅತ್ಯಂತ ಅಗತ್ಯ. ವೃತ್ತಿಪರ ಮಾರ್ಗವನ್ನು ಇವರು ಪಾಲನೆ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ. ಹೊಸತು ಮಾಡಬೇಕೆಂಬ ತುಡಿತ ಅವರಿಗಿದೆ ಎಂದರು. ಡಿ. ದೇವರಾಜ ಅರಸರು ರಾಜಕೀಯದಲ್ಲಿ ಇರಲು ಸಾಧ್ಯವೇ ಇಲ್ಲ ಎನ್ನುವಂತಹವರನ್ನು ಗುರುತಿಸಿ, ಟಿಕೆಟ್ ನೀಡಿ, ವಿಧಾನಸೌಧ ಹತ್ತಿಸಿದರು ಎಂದರು. ಹಿಂದೆ ರಾಜಕೀಯ ಈಗಿನ ರೀತಿ ಇರಲಿಲ್ಲ. ಹಿಂದೆ ಹಣವನ್ನು ಕೊಟ್ಟು ಮತವನ್ನು ಕೊಡುತ್ತಿದ್ದರು. ವೀಳ್ಯದ ಎಲೆಯೊಂದಿಗೆ ಚುನಾವಣೆಗೆ ಹಣಕೊಡುತ್ತಿದ್ದರು ಎಂದರು. ದೇವರಾಜ ಅರಸರು ರಾಜಕೀಯವಾಗಿ ಅಜೇಯರಾಗಿ ಬದುಕಿದರು. ಅಜೇಯರಾಗಿ ಸತ್ತರು. ನಾನು 7 ಬಾರಿ ಗೆಲುವು, 4 ಬಾರಿ ಸೋಲು ಕಂಡಿದ್ದೇನೆ. ಇನ್ನೂ ರಾಜಕೀಯವಾಗಿ ಉಳಿದಿದ್ದೇನೆ, ಇನ್ನೂ ಸ್ವಲ್ಪ ಕಾಲ ಉಳಿಯುತ್ತೇನೆ ಎಂದರು.  ರಾಜಕೀಯದಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವ, ಧ್ವನಿ ಇಲ್ಲದವರಿಗೆ ಧ್ವನಿ ಕೊಡುವ ಕೆಲಸ ಆಗಬೇಕು. ಆ ಪ್ರಯತ್ನವನ್ನು ನಾನು ಮಾಡಿದ್ದೇನೆ.  ನನಗೆ 2006ರ ಉಪ ಚುನಾವಣೆ ಅತ್ಯಂತ ಕ್ಲಿಷ್ಟಕರ ಚುನಾವಣೆಯಾಗಿದೆ. ಇನ್ನೊಮ್ಮೆ ಚುನಾವಣೆಗೆ ನಿಲ್ಲಬಾರದು ಎನಿಸಿತ್ತು. ಆದರೆ ರಾಜಕಾರಣಿಗಳಿಗೆ ಚುನಾವಣೆ ಎನ್ನುವುದು ಹೆರಿಗೆ ಬೇನೆ ಇದ್ದಂತೆ. ಮತ್ತೆ ಮತ್ತೆ ಚುನಾವಣೆ ಎದುರಿಸಲು ಮುಂದಾಗುತ್ತೇವೆ ಎಂದರು. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂದು ಹಲವಾರು ಮುಖ್ಯಮಂತ್ರಿಗಳು ಹೆದರಿದ್ದರು. ಸಮಾಜವಾದಿ ಆಗಿದ್ದ ಜೆ.ಎಚ್. ಪಟೇಲರು ಸಹ ಚಾಮರಾಜನಗರ ಹೊಸದಾಗಿ ಜಿಲ್ಲೆ ಆದಾಗ, ಮಹದೇಶ್ವರ ಬೆಟ್ಟದಲ್ಲಿ ನೂತನ ಜಿಲ್ಲೆಯಲ್ಲಿ ಉದ್ಘಾಟಿಸಿದ್ದರು. ನಾನು ಮುಖ್ಯಮಂತ್ರಿಯಾದ ನಂತರ ಏಳೆಂಟು ಬಾರಿ ಹೋಗಿ ಬಂದಿದ್ದೇನೆ. ಅಧಿಕಾರ ಹೋಗಲಿಲ್ಲ, ಆದರೆ ಮತ್ತಷ್ಟು ಗಟ್ಟಿಯಾಯಿತು ಎಂದರು. ಮೂಢ ನಂಬಿಕೆಗಳು ಕೆಲಸ ಮಾಡಲ್ಲ. ಜನರ ಪ್ರೀತಿ, ವಿಶ್ವಾಸ, ನಾವು ಮಾಡುವ ಕೆಲಸಗಳು ಮಾತ್ರ ನಮ್ಮನ್ನು ಗೆಲ್ಲಿಸುತ್ತವೆ. ಜಾತಿ, ಹಣ, ತೋಳ್ಬಲ ಮತ್ತಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ವಾಸು, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಡಾ.ಗೀತಾ ಮಹದೇವಪ್ರಸಾದ್, ಕೃತಿಯ ಕರ್ತೃ ಅಂಶಿ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: