ಮೈಸೂರು

ಗೌರಿಶಂಕರದಲ್ಲಿ ಕಾಣಿಸಿದ ಚಿರತೆ ಬೋನಿನಲ್ಲಿ ಸೆರೆ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸಮೀಪ ಗೌರಿಶಂಕರ ಬಡಾವಣೆಯ ಬಳಿ ಬಂಡೆಯೊಂದರ ಮೇಲೆ ಕಳೆದ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಕಾಣಿಸಿಕೊಂಡು ಸ್ಥಳೀಯರನ್ನು ಆತಂಕಕ್ಕೀಡು ಮಾಡಿತ್ತು. ಮಂಗಳವಾರ ಬೆಳಗಿನ ಜಾವ ಚಿರತೆ ಅರಣ್ಯ ಇಲಾಖೆಯವರು ಇರಿಸಿದ ಬೋನಿಗೆ ಬಿದ್ದಿದೆ.

ಗೌರಿಶಂಕರ ಬಡಾವಣೆಯ ಬಳಿ ಇರುವ ಅರಣ್ಯದ ಕಲ್ಲುಬಂಡೆಯ ಮೇಲೆ ಚಿರತೆ ಮಧ್ಯಾಹ್ನದ ವೇಳೆ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾಧಿಕಾರಿಗಳು ಚಿರತೆ ನಗರಕ್ಕೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದರು.

ಕಲ್ಲುಬಂಡೆಯ ಮೇಲೆ ಕುಳಿತಿದ್ದ ಚಿರತೆ ಸಾರ್ವಜನಿಕರ ಗಲಾಟೆಗೂ ಮಣಿದಿರಲಿಲ್ಲ. ಅರಣ್ಯ  ಇಲಾಖಾಧಿಕಾರಿಗಳು ಪಟಾಕಿ ಸಿಡಿಸಿದಾಗ ಹೊರಟು ಹೋಗಿತ್ತು. ಆದರೆ ಮತ್ತದೇ ಜಾಗದಲ್ಲಿ ಪ್ರತ್ಯಕ್ಷವಾಗಿತ್ತು. ಸ್ಥಳೀಯರ ಹಸು, ಕರು, ನಾಯಿಗಳನ್ನು ಹೊತ್ತೊಯ್ದಿತ್ತು. ಸಾರ್ವಜನಿಕರು ಇದರಿಂದ ಹೈರಾಣಾಗಿದ್ದರು. ಇದರಿಂದ ಅರಣ್ಯ ಇಲಾಖಾ ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯಲು ಸೋಮವಾರ ರಾತ್ರಿ ಕಲ್ಲುಬಂಡೆಯ ಮೇಲೆ ಬೋನನ್ನು ಇರಿಸಿದ್ದರು. ಆ ಬೋನಿನಲ್ಲಿ ಸುಮಾರು ನಾಲ್ಕು ವರ್ಷ ಪ್ರಾಯದ ಚಿರತೆ ಸೆರೆ ಸಿಕ್ಕಿದೆ. ಇದೀಗ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Leave a Reply

comments

Related Articles

error: