ಪ್ರಮುಖ ಸುದ್ದಿಮೈಸೂರು

ಬೆಳಗೆರೆ ಅವರನ್ನು ಯಾಕೆ ಬಂಧಿಸಿದ್ದಾರೆ ಎಂಬ ಮಾಹಿತಿ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಡಿ.9:-  ಪತ್ರಕರ್ತ ರವಿ ಬೆಳಗೆರೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ   ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗೆರೆ ಅವರನ್ನು ಯಾಕೆ ಬಂಧಿಸಿದ್ದಾರೆ ಎಂಬ ಮಾಹಿತಿ ಇಲ್ಲ ಎಂದಿದ್ದಾರೆ.

ಮೈಸೂರಿನ ತಮ್ಮ ನಿವಾಸದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವ ಕಾರಣಕ್ಕಾಗಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಪೊಲೀಸರೊಂದಿಗೆ ನಾನು ಮಾತನಾಡಿಲ್ಲ. ಮಾಹಿತಿ ಕಲೆ ಹಾಕಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಅದೇನೇ ಇದ್ದರೂ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.

ಸಂಸದ ಪ್ರತಾಪ್ ಸಿಂಹ ಅವರಿಗೆ ನಿನ್ನೆ ಕಾರ್ಯಕ್ರಮದಲ್ಲಿ ಬುದ್ದಿ ಹೇಳಿದ್ದೇನೆ. ನೀನು ಲೇಖಕ, ಸಂಸದ, ಇನ್ನೂ ಚಿಕ್ಕವನು. ನಿನ್ನ ವರ್ತನೆ, ಭಾಷೆ ಸರಿಪಡಿಸಿಕೊಳ್ಳಲು  ಹೇಳಿದ್ದೇನೆ ಎಂದರು. ಗುಜರಾತ್ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅಲ್ಲಿ ಜನ‌ ಬದಲಾವಣೆ ಬಯಸಿದ್ದಾರೆ. ನಾನು ಕ್ಯಾಂಪೇನ್ ಮಾಡಿಲ್ಲದ ಕಾರಣ ‌ಖಚಿತವಾಗಿ ಹೇಳಲಾಗದು. ಆದರೆ ಅಲ್ಲಿ ಬಿಜೆಪಿ ಈ ಬಾರಿ ಸೋಲುತ್ತೆ ಎಂಬ ಮುನ್ಸೂಚನೆ ಇದೆ‌  ಎಂದರು. ಭಡ್ತಿ ಮೀಸಲಾತಿ ಕುರಿತು ಪ್ರತಿಕ್ರಿಯಿಸಿ ಈ  ಸಂಬಂಧ ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇವೆ. ವಿಷಯ ರಾಷ್ಟ್ರಪತಿಗಳ ಪ್ಯಾನೆಲ್ ಗೆ ಹೋದ ಮೇಲೆ ಭೇಟಿ ಮಾಡುತ್ತೇನೆ ಎಂದರು. ಉಮೇಶ್ ಕತ್ತಿ ನನಗೆ‌ ಮೊದಲಿನಿಂದಲೂ ಸ್ನೇಹಿತ, ಕಾಂಗ್ರೆಸ್ ಗೆ ಬರುತ್ತೇನೆಂದು ಹೇಳಿಲ್ಲ. ಬಿಜೆಪಿಯ ಒಂದಷ್ಟು ಶಾಸಕರು‌ ನನ್ನ ಜತೆ ಸಂಪರ್ಕದಲ್ಲಿ ಇದ್ದಾರೆ. ಯಾರು, ಎಷ್ಟು ಮಂದಿ‌ ಅನ್ನೋದನ್ನು ಈಗ ಹೇಳಲಾಗದು. ಬರುವ ಶಾಸಕರ ಗೆಲ್ಲುವ ಪರಿಸ್ಥಿತಿ ನೋಡಿ ಮುಂದೆ ತೀರ್ಮಾನ  ಕೈಗೊಳ್ಳಲಾಗುವುದು.  ನಾನು ಚುನಾವಣಾ ಪೂರ್ವ ನಿರಂತರ ಪ್ರವಾಸ ಮಾಡುತ್ತಿದ್ದೇನೆ.  ಡಿ.13ರಿಂದ ಪ್ರವಾಸವನ್ನು ನಿರಂತರವಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರದಲ್ಲಿ ಪೂರಕ ವಾತಾವರಣವಿಲ್ಲ ಎಂಬ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ  ವರುಣಾ ಕ್ಷೇತ್ರದ ಬಗ್ಗೆ ಎಲ್ಲ ಚೆನ್ನಾಗಿ ಗೊತ್ತಿದ್ದರೆ ಸದಾನಂದ ಗೌಡರೇ ಬಂದು‌ ನಿಲ್ಲಲಿ, ಅವರಿಗೂ ವರುಣಾಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಇದೇ ವೇಳೆ ಸಾರ್ವಜನಿಕರಿಂದ ನೂರಾರು ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: